

ನಾಪೋಕ್ಲು: ಸಮೀಪದ ಕೊಟ್ಟಮುಡಿಯಲ್ಲಿ ಶುಕ್ರವಾರ ಸಂಜೆ ಎರಡು ಪ್ರತ್ಯೇಕ ಅಪಘಾತ ಪ್ರಕರಣಗಳು ಸಂಭವಿಸಿದ್ದು, ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಕೊಟ್ಟಮುಡಿಯಲ್ಲಿ ರಸ್ತೆ ಬದಿ ನಿಂತಿದ್ದ ಜೀಪಿನಲ್ಲಿ ಕುಳಿತ್ತಿದ್ದ ವ್ಯಕ್ತಿಯೊಬ್ಬರಿಗೆ ಕಾರು ಡಿಕ್ಕಿಯಾಗಿ ಗಾಯಾಳು ಶನಿವಾರ ಮುಂಜಾನೆ ಮೃತಪಟ್ಟಿದ್ದಾರೆ. ಹೊದವಾಡ ಗ್ರಾಮದ ನಿವಾಸಿ ಎಂ.ಎಂ ಅಬ್ದುಲ್ಲಾ (51) ಮೃತಪಟ್ಟವರು.
ಕಾರು ಡಿಕ್ಕಿಯಾದ ಪರಿಣಾಮ ಅಬ್ದುಲ್ಲಾ ಅವರ ಸೊಂಟದ ಭಾಗಕ್ಕೆ ಏಟಾಗಿತ್ತು. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಶನಿವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಹೊದವಾಡದ ಅಬ್ದುಲ್ ಆಝೀಜ್ ನೀಡಿದ ದೂರಿನ ಅನ್ವಯ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಕಾರು, ಆಟೋ ನಡುವೆ ಕೊಟ್ಟಮುಡಿ ಜಂಕ್ಷನ್‌ನಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಆಟೋ ಚಾಲಕ ಎನ್.ಸಿ.ಕುಟ್ಟಪ್ಪ ಅವರಿಗೆ ಗಂಭೀರ ಗಾಯಗಳಾಗಿದ್ದು, ಮಡಿಕೇರಿಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಟೋ ಜಖಂಗೊಂಡಿದೆ.