ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ಪ್ರಕರಣ: ನನ್ನ ಮೇಲೆ ಶಿಕ್ಷಕಿ ಮಾಟಮಂತ್ರ ಮಾಡಿಸಿದ್ದಾರೆ...

diet
Published on

ಮಂಗಳೂರು: ಜಿಲ್ಲಾ ಶಿಕ್ಷಕ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್)ಗೆ ಹಾಡಹಗಲೇ ನುಗ್ಗಿದ ಯುವಕನೊಬ್ಬ ಮೂವರು ಮಹಿಳಾ ಸಿಬ್ಬಂದಿ ಮೇಲೆ ತಲವಾರ್​ನಿಂದ ದಾಳಿ ಮಾಡಿದ್ದ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ನನ್ನ ಮೇಲೆ ಶಿಕ್ಷಕಿ ಮಾಟಮಂತ್ರ ಮಾಡಿಸಿದ್ದಾರೆ... ಎಂದು ಹಲ್ಲೆ ಮಾಡಿದ ಆರೋಪಿ ಪೊಲೀಸರ ಬಳಿ ಬಾಯ್ಬಿಟ್ಟಿದ್ದಾನೆ.

ನಾನು ವಿದ್ಯಾಭ್ಯಾಸ ಮಾಡುತ್ತಿದ್ದಾಗ ಶಿಕ್ಷಕಿ ವೀಣಾ ಅವರು ನನ್ನನ್ನು ಅವಮಾನಿಸಿದ್ರು. ವಿನಾಕಾರಣ ನನಗೆ ಕ್ಲಾಸ್​ನಲ್ಲಿ ಕಿರುಕುಳ ಕೊಡ್ತಾ ಇದ್ರು. ಅಲೋಶಿಯಸ್ ವಿದ್ಯಾರ್ಥಿಯೊಬ್ಬನ ಜತೆ ಸೇರಿ ನನ್ನ ಮೇಲೆ ಮಾಟಮಂತ್ರ ಮಾಡಿಸಿದ್ರು. ಇದ್ರಿಂದ ನನಗೆ ಈಗಲೂ ತೊಂದರೆ ಆಗ್ತಾ ಇದೆ. ನನ್ನ ಮೇಲಿನ ಬ್ಲಾಕ್ ಮ್ಯಾಜಿಕ್ ತೆಗೆಯಿರಿ ಅಂತಾ ಶಿಕ್ಷಕಿಗೆ ರಿಕ್ವೆಸ್ಟ್ ಮಾಡಲು ಬಂದಿದ್ದೆ. ಅವರು ಅಲ್ಲಿ ಇರಲಿಲ್ಲದ ಕಾರಣ ಕೋಪ ಬಂದು ಅಟ್ಯಾಕ್ ಮಾಡಿದೆ... ಎಂದು ನವೀನ್​ ಹೇಳಿದ್ದಾರೆ.

ಸೋಮವಾರ ಮಧ್ಯಾಹ್ನ 12.45ರ ವೇಳೆಗೆ ಡಯಟ್​ ಕಚೇರಿ ಒಳಗೆ ಬಂದ ನವೀನ್​, ‘ನಾನು ಹಳೇ ವಿದ್ಯಾರ್ಥಿ, ಟೀಚರ್​ ವೀಣಾರನ್ನು ನೋಡಬೇಕು, ಅವರಿಗೆ ಗಿಫ್ಟ್ ಕೊಡಬೇಕಿದೆ’ ಎಂದು ಕೇಳಿದ್ದ. ಅವನು ಕೇಳಿದ ಟೀಚರ್ ಇಲ್ಲಿಲ್ಲ ಎಂದು ಹೇಳಿದ ಕೂಡಲೇ ಆತ ತನ್ನ ಬ್ಯಾಗ್​ನಿಂದ ತಲವಾರ್ ತೆಗೆದು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ. ಗದ್ದಲ ಕೇಳಿ ಓಡಿಬಂದ ಸ್ಥಳೀಯರು ಮತ್ತು ಪಕ್ಕದಲ್ಲೇ ಇದ್ದ ಮಂಗಳೂರು ಕಾರಾಗೃಹದ ಸಿಬ್ಬಂದಿಯು ಆರೋಪಿಯನ್ನು ಹಿಡಿದಿದ್ದರು. ಈ ಘಟನೆಯಲ್ಲಿ ಪ್ರಥಮ ದರ್ಜೆ ಸಹಾಯಕಿ ರೀನಾ(45), ಲಿಪಿಕರಾದ ನಿರ್ಮಲಾ(43), ಗ್ರೂಪ್​ ಡಿ ಸಹಾಯಕಿ ಗುಣವತಿ(58) ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕುಂದಾಪುರ ನಿವಾಸಿಯಾದ ನವೀನ್, ಇಲ್ಲಿನ ಡಯಟ್​ನಲ್ಲೇ 2012ರಲ್ಲಿ ಡಿಎಡ್ ಮಾಡಿದ್ದ. ಅಲ್ಲಿನ ನ್ಯಾಯಾಲಯದಲ್ಲಿ ಜವಾನನಾಗಿದ್ದ. ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net