ಮಲೆ‌ ಮಹದೇಶ್ವರ ಬೆಟ್ಟದ ದೇಗುಲ ಆವರಣದಲ್ಲಿ ಕುಸಿದು ಬಿದ್ದ ಅರ್ಚಕ ಸಾವು

MM Hills
Published on

ಹನೂರು: ಮಲೆ‌‌ಮಹದೇಶ್ವರ ಬೆಟ್ಟದ‌ ದೇವಸ್ಥಾನದ ಅರ್ಚಕರೊಬ್ಬರು ಮಂಗಳವಾರ ನಸುಕಿನಲ್ಲಿ ದೇವರಿಗೆ ಪೂಜೆ ನೆರವೇರಿಸಿ ದೇವರ ಉತ್ಸವದಲ್ಲಿ ಪಾಲ್ಗೊಳ್ಳುವ ವೇಳೆ ಕುಸಿದು ಬಿದ್ದು, ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗದಲ್ಲೇ ಮೃತಪಟ್ಟಿದ್ದಾರೆ.

ಅರ್ಚಕ ನಾಗಣ್ಣ(45) ಮೃತರು. ದೊಡ್ಡಾಣೆ ಗ್ರಾಮದ ನಿವಾಸಿಯಾದ ನಾಗಣ್ಣ, ಇತ್ತೀಚಿಗೆ ಮಾರ್ಟಳ್ಳಿಯ ಕಡಬೂರಿನಲ್ಲಿ ವಾಸವಿದ್ದರು. ಬೇಡಗಂಪಣ ಸಮುದಾಯದ ಉಪ ಅರ್ಚಕರಾಗಿದ್ದ ನಾಗಣ್ಣ ಅವರಿಗೆ ಈ ತಿಂಗಳು ಮಲೆ ಮಹದೇಶ್ವರ ದೇಗುಲದಲ್ಲಿ ಸರದಿ ಪೂಜೆ ಮಾಡಲು ಅವಕಾಶ ಸಿಕ್ಕಿತ್ತು. ಮಂಗಳವಾರ ಮುಂಜಾನೆ ದೇವಸ್ಥಾನಕ್ಕೆ ಬಂದು ಬೆಳಗಿನ ಪೂಜಾ ಕಾರ್ಯ ಮುಗಿಸಿದ್ದರು. ದೇಗುಲದ ಹೊರಗೆ ಉತ್ಸವ ಬರುವ ಸ್ಥಳದಲ್ಲಿ ಪೂಜಾ ಕಾರ್ಯದಲ್ಲಿ ಪಾಲ್ಗೊಳ್ಳಲು ನಡೆದು ಹೋಗುವಾಗ ಕುಸಿದು ಬಿದ್ದಿದ್ದಾರೆ.

ಜತೆಗಿದ್ದ ಅರ್ಚಕರು ತಕ್ಷಣ ನಾಗಣ್ಣ ಅವರನ್ನು ಮಲೆ ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಹನೂರಿಗೆ ರವಾನಿಸುವಾಗ ತಾಳಬೆಟ್ಟದ ಬಳಿ ಮೃತಪಟ್ಟಿದ್ದಾರೆ. ಮೃತರಿಗೆ ಪತ್ನಿ, ಪುತ್ರ, ಪುತ್ರಿ ‌ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net