

ಕುಣಿಗಲ್: ಎರಡು ಚಿರತೆಗಳ ನಡುವೆ ನಡೆದ ಭೀಕರ ಕಾಳಗದಲ್ಲಿ ಗಂಡು ಚಿರತೆ ಮೃತಪಟ್ಟ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹುತ್ರಿದುರ್ಗ ಹೋಬಳಿಯ ಶಂಕರೋಡೆಯರಪಾಳ್ಯದಲ್ಲಿ ಸಂಭವಿಸಿದೆ.
ಶಂಕರೋಡೆಯರಪಾಳ್ಯ ಗ್ರಾಮದ ಜಯರಾಮಯ್ಯ ಎಂಬುರವ ತೋಟದಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಎಂದಿನಂತೆ ಜಯರಾಮಯ್ಯರ ಪತ್ನಿ ಗಂಗಮ್ಮ ಅವರು ಭಾನುವಾರ ಬೆಳಗ್ಗೆ ಜಮೀನಿಗೆ ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ. ಸುದ್ದಿ ತಿಳಿಯುತ್ತಿದ್ದಂತೆ ಹುಲಿಯೂರುದುರ್ಗ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನು ಚಿರತೆ ಸತ್ತಿದೆ ಎಂದು ಗೊತ್ತಾಗುತ್ತಿದ್ದಂತೆ ಗ್ರಾಮಸ್ಥರು ಮತ್ತು ಅಕ್ಕಪಕ್ಕದ ಊರಿನವರು ನೋಡಲು ಜಮೀನಿಗೆ ಭೇಟಿ ನೀಡಿದ್ದರು. ಈ ವ್ಯಾಪ್ತಿಯಲ್ಲಿ ಚಿರತೆಗಳಿದ್ದು, ನಾಯಿಗಳು ಮತ್ತು ಜಾನುವಾರುಗಳ ಮೇಲೆ ದಾಳಿ ಮಾಡುವ ಪ್ರಕರಣ ಪದೇಪದೆ ಸಂಭವಿಸುತ್ತಲೇ ಇದೆ. ಚಿರತೆ ಭಯದಲ್ಲೇ ಕಾಡಂಚಿನ ಗ್ರಾಮಗಳ ಜನರು ದಿನದೂಡುತ್ತಿದ್ದಾರೆ. ಇದೀಗ ಚಿರತೆಗಳ ಕಾದಾಟ ನಡೆದು ಚಿರತೆಯೊಂದು ಸತ್ತಿದೆ.