

ಮಂಡ್ಯ(ಮಳವಳ್ಳಿ): ಆರ್ಟಿಒ ಸಿಬ್ಬಂದಿ ವಸೂಲಿ ದಂಧೆ ಹೇಗಿರುತ್ತೆ ಗೊತ್ತಾ? ಆರ್ಟಿಒ ಅಧಿಕಾರಿ ಇಲ್ಲದ ವೇಳೆಯೂ ಆರ್ಟಿಒ ವಾಹನ ಚಾಲಕನೇ ಲಾರಿಯನ್ನ ಅಡ್ಡಗಟ್ಟಿ ಹಣ ವಸೂಲಿ ಮಾಡುತ್ತಿದ್ದಾಗ ಸಾರ್ವಜನಿಕರು ವಿಡಿಯೋ ಚಿತ್ರೀಕರಿಸಿದ್ದಾರೆ. ಈ ದೃಶ್ಯ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಸಾರ್ವಜನಿಕರಿಂದ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.
ಈ ಘಟನೆ ಮಳವಳ್ಳಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಪ್ರಕರಣವೊಂದರ ಸಂಬಂಧ ಸಾರಿಗೆ ಇನ್ಸ್ಪೆಕ್ಟರ್ ಪಟ್ಟಣದ ನ್ಯಾಯಾಲಯಕ್ಕೆ ಬಂದಿದ್ದರು ಎನ್ನಲಾಗಿದ್ದು, ಆ ವೇಳೆ ಚಾಲಕ ಇಲಾಖೆಯ ಜೀಪ್ ತೆಗೆದುಕೊಂಡು ಪಟ್ಟಣ ಹೊರವಲಯದ ಶಾಂತಿ ಕಾಲೇಜು ಬಳಿ (ಈತನ ಹೆಸರು ತಿಳಿದು ಬಂದಿಲ್ಲ) ನಿಲ್ಲಿಸಿಕೊಂಡು ಬೋಡ್ರಸ್ ಕಲ್ಲು ತುಂಬಿಕೊಂಡು ಬರುತ್ತಿದ್ದ ಲಾರಿಯನ್ನು ಅಡ್ಡಗಟ್ಟಿದ್ದಾನೆ.
ಈ ವೇಳೆ ಲಾರಿ ಚಾಲಕ ಕೃಷ್ಣ ಎಂಬುವನ ಬಳಿ ದಾಖಲೆ ಪರಿಶೀಲಿಸುವ ನೆಪದಲ್ಲಿ 6 ಸಾವಿರ ಲಂಚ ಕೇಳಿದ್ದು, ಇದನ್ನು ಗಮನಿಸಿದ ಸಾರ್ವಜನಿಕರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದುಕೊಂಡು ಆರ್ಟಿಒ ಚಾಲಕನನ್ನು ತಪಾಸಣೆ ಮಾಡಲು ನಿಮಗೆ ಅನುಮತಿ ಇದೇಯೇ ಎಂದು ಪ್ರಶ್ನಿಸಿದ್ದಾರೆ. ಇದರಿಂದ ವಿಚಲಿತನಾದ ಚಾಲಕ ನಾನು ಸಾಹೇಬರ ಅಸಿಸ್ಟೆಂಟ್. ಸಾಹೇಬರು ನ್ಯಾಯಾಲಯದಲ್ಲಿ ಇದ್ದಾರೆ. ಅವರ ಅನುಮತಿ ಪಡೆದು ತಪಾಸಣೆ ಮಾಡುತ್ತೇದ್ದೇನೆಂದು ಸಮರ್ಥನೆ ನೀಡಲು ಮುಂದಾಗಿದ್ದ.
ಇದನ್ನೊಪ್ಪದ ಸ್ಥಳೀಯರು ಇಲಾಖೆ ಜೀಪ್ ಮತ್ತು ಲಾರಿಯನ್ನು ಗ್ರಾಮಾಂತರ ಪೊಲೀಸ್ ಠಾಣೆಗೆ ಕರೆತಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸಾರಿಗೆ ಅಧಿಕಾರಿ ಲಾರಿ ವಶ ಪಡಿಸಿಕೊಂಡಿರುವ ಬಗ್ಗೆ ಠಾಣೆಗೆ ಮಾಹಿತಿ ನೀಡಿ ತೆರಳಿದ್ದು, ಈ ಸಂಬಂಧ ರಾತ್ರಿಯ ವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲವೆಂದು ತಿಳಿದು ಬಂದಿದೆ. ಇಷ್ಟೆಲ್ಲದರ ನಡುವೆ ಆರ್ಟಿಒ ಚಾಲಕ ಲಂಚ ಕೇಳುವ ವಿಡಿಯೋ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಇಲಾಖೆ ಅಧಿಕಾರಗಳ ಬಗ್ಗೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.