

ಚಿಕ್ಕಮಗಳೂರು: ಅತಿಯಾದ ಬಿಸಿಲು ಹಾಗೂ ನೀರಿನ ಅಭಾವದಿಂದ ಜಾನುವಾರುಗಳ ಆರೋಗ್ಯ ಸ್ಥಿತಿ ಹದಗೆಡುವ ಸಾಧ್ಯತೆಯಿರುವುದರಿಂದ ಸ್ಥಳೀಯವಾಗಿಯೇ ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸಲು ಅನುಕೂಲವಾಗುವಂತೆ ಅಂಬಳೆ ಗ್ರಾಮದಲ್ಲೇ ತಾತ್ಕಾಲಿಕ ಚಿಕಿತ್ಸಾಲಯ ತೆರೆಯಲಾಗಿದೆ ಎಂದು ಶಾಸಕಿ ನಯನಾ ಮೋಟಮ್ಮ ತಿಳಿಸಿದರು.
ತಾಲೂಕಿನ ಅಂಬಳೆ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಪಶುಚಿಕಿತ್ಸಾ ಕೇಂದ್ರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಜಾನುವಾರುಗಳ ಆರೋಗ್ಯ ಹದಗೆಟ್ಟಾಗ ಕೂಡಲೇ ಅವುಗಳನ್ನು ಪಟ್ಟಣಕ್ಕೆ ಕರೆದೊಯ್ಯಲು ಸಾಧ್ಯವಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಪಶುಚಿಕಿತ್ಸಾಲಯಗಳು ಆರಂಭಗೊಂಡಲ್ಲಿ ಜಾನುವಾರುಗಳಿಗೆ ಹಾಗೂ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಅಂಬಳೆಯಲ್ಲಿ ಪಶು ಚಿಕಿತ್ಸಾಲಯ ತೆರೆಯಬೇಕೆಂಬ ಬೇಡಿಕೆಯಿದ್ದ ಹಿನ್ನೆಲೆಯಲ್ಲಿ ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಿದ ವೇಳೆ ನೂತನ ಆಸ್ಪತ್ರೆಗೆ ಮಾತ್ರ ಅವಕಾಶವಿದೆ ಎಂಬುದು ತಿಳಿದುಬಂದಿತು. ಹೀಗಾಗಿ ಸದ್ಯಕ್ಕೆ ತಾತ್ಕಾಲಿಕ ಕೇಂದ್ರ ಆರಂಭಿಸಲಾಗಿದೆ. ಮುಂದೆ ಅಂಬಳೆಯಲ್ಲಿ ಜಾಗ ಗುರುತಿಸಿ ಸಕಲ ಸೌಕರ್ಯಗಳನ್ನೊಳಗೊಂಡ ಪರಿಪೂರ್ಣ ಪಶು ಚಿಕಿತ್ಸಾ ಕೇಂದ್ರ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.
ಜಿಪಂ ಮಾಜಿ ಸದಸ್ಯ ಕೆ.ವಿ.ಮಂಜುನಾಥ್ ಮಾತನಾಡಿ, ಅಂಬಳೆ ಹಾಗೂ ಮುಗುಳುವಳ್ಳಿ ಗ್ರಾಮಸ್ಥರು ಈ ಹಿಂದೆ ಪಶು ಚಿಕಿತ್ಸಾಲಯ ಸಂಬಂಧ ಶಾಸಕರಿಗೆ ಒತ್ತಾಯಿಸಿದ್ದರು. ಇದೀಗ ಶಾಸಕರು ಅಂಬಳೆ ಗ್ರಾಮಕ್ಕೆ ತಾತ್ಕಾಲಿಕ ಪಶು ಚಿಕಿತ್ಸಾಲಯ ತೆರೆದಿದ್ದು, ಮುಂಬರುವ ದಿನಗಳಲ್ಲಿ ಮುಗುಳುವಳ್ಳಿ ಗ್ರಾಮಕ್ಕೂ ಅನುಕೂಲ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಅಂಬಳೆ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ವಿಜಯ್‌ಕುಮಾರ್, ಗ್ರಾಪಂ ಸದಸ್ಯೆ ವಿಜಯಮ್ಮ, ಗ್ರಾಮಸ್ಥರಾದ ಮಂಜೇಗೌಡ, ಮಲ್ಲಿಕಾರ್ಜುನ್, ಸೋಮಶೇಖರ್, ಹರಿಹರದಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಕೆಂಚೇಗೌಡ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ. ಮೋಹನ್‌ಕುಮಾರ್, ಸಹಾಯಕ ನಿರ್ದೇಶಕ ಡಾ. ಹೇಮಂತ್‌ಕುಮಾರ್ ಮತ್ತಿತರರಿದ್ದರು.