

ಅಂಕೋಲಾ: ರೈಲ್ವೆ ಸಿಬ್ಬಂದಿಯೊಬ್ಬರ ಸಮಯಪ್ರಜ್ಞೆ ಮತ್ತು ಕರ್ತವ್ಯ ನಿಷ್ಠೆಯಿಂದ ಸಂಭವಿಸಬಹುದಾದ ಭಾರಿ ರೈಲು ದುರಂತವೊಂದು ತಪ್ಪಿದ ಘಟನೆ ತಾಲೂಕಿನ ಹಾರವಾಡ ರೈಲ್ವೆ ಸ್ಟೇಶನ್ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಗಿನ ಜಾವ ನಡೆದಿದೆ.
ಹಾರವಾಡ ಸ್ಟೇಶನ್ ಸೀನಿಯರ್ ಟ್ರ್ಯಾಕ್ ಮ್ಯಾನ್ ಛತ್ರಪತಿ ಆನಂದು ಗೌಡ ಅವರ ಸಮಯ ಪ್ರಜ್ಞೆಗೆ ರೈಲು ಅಧಿಕಾರಿಗಳಿಂದ ಭ ಮೆಚ್ಚುಗೆ ವ್ಯಕ್ತವಾಗಿದೆ. ಬೆಳಗಿನ ಜಾವ 4.49 ಗಂಟೆಗೆ ತಾಂತ್ರಿಕ ದೋಷದಿಂದ ರೈಲು ಹಳಿಯ ಜಾಯಿಂಟ್ ತುಂಡಾಗಿರುವುದನ್ನು ಗಮನಿಸಿದ ಛತ್ರಪತಿ ಕೂಡಲೇ ಸ್ಟೇಶನ್ ಮಾಸ್ಟರ್ ಮೂಲಕ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಈ ಮೂಲಕ ಸಂಭವಿಸಬಹುದಾದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
ಕೊಂಕಣ ರೈಲ್ವೆ ಕಾರ್ಪೆರೇಶನ್ ಲಿಮಿಟೆಡ್ ಮಡಗಾಂವ್ ವಿಭಾಗೀಯ ಹಿರಿಯ ಅಧಿಕಾರಿಗಳು ಹಾರವಾಡಕ್ಕೆ ಆಗಮಿಸಿ ಛತ್ರಪತಿ ಆನಂದು ಗೌಡ ಅವರನ್ನು ಸನ್ಮಾನಿಸಿ ಗೌರವಿಸಿದರು. ಕಾರವಾರ ಎಸ್ಎಸ್ಇ ಶೇಷಗಿರಿ, ಕುಮಟಾ ಸ್ಟೇಶನ್ ಜೆ.ಇ. ಪಂಕಜ, ಹಾರವಾಡ ಸ್ಟೇಶನ್ ಮಾಸ್ಟರ್ ಶೆಟ್ಟಿ, ಇತರರು ಉಪಸ್ಥಿತರಿದ್ದರು.