ಮಾಯಕೊಂಡದಲ್ಲಿ ಬಿಸಿಲಿಗೆ ಬಾಡುತ್ತಿರುವ ಮೆಕ್ಕೆಜೋಳ ಸಸಿ

Mayakonda, Sunflower, Maize,
Published on

ಮಾಯಕೊಂಡ: ಮಾಯಕೊಂಡ, ಆನಗೋಡು, ಅಣಜಿ ಹೋಬಳಿಗಳ ನೂರಾರು ಗ್ರಾಮಗಳಲ್ಲಿ ವಾರದ ಹಿಂದೆ ಬಿತ್ತನೆ ಮಾಡಿದ್ದ ಮೆಕ್ಕೆಜೋಳ ಬೆಳೆ ಮಳೆಗಾಗಿ ಎದುರು ನೋಡುತ್ತಿದೆ.

8, 10 ದಿನಗಳ ಹಿಂದೆ ಬಿದ್ದ ಮಳೆಗೆ ಈ ಮೂರು ಹೋಬಳಿಗಳಲ್ಲಿ ಶೇ.50 ರಷ್ಟು ಬಿತ್ತನೆ ಮುಗಿದಿದೆ. ಆದರೆ, ಮೊಳಕೆಯೊಡೆದು ಸಸಿ ಚಿಗುರುವ ಹಂತದಲ್ಲಿ ಮಳೆಯಾಗದೆ ಬಿರು ಬಿಸಿಲಿಗೆ ಮುದುಡಿಕೊಂಡಿದೆ. ಕೆಲವೆಡೆ ರೈತರು ಮೆಕ್ಕೆಜೋಳ ಬಿತ್ತನೆ ಸಮಯ ಮುಗಿಯುತ್ತದೆ ಎನ್ನುವ ಕಾರಣ ಹಾಗೂ ಮಳೆ ಬರುವ ನಿರೀಕ್ಷೆ ಇಟ್ಟುಕೊಂಡು ಒಣಭೂಮಿಗೆ ಬಿತ್ತನೆ ಮಾಡಿದ್ದಾರೆ.

ಮಾಯಕೊಂಡ ಹೋಬಳಿಯ ಹಲವು ಗ್ರಾಮಗಳಲ್ಲಿ ಬಿತ್ತನೆ ಮಾಡಿದ ಜಮೀನುಗಳಲ್ಲಿ ಅಲ್ಲೊಂದು ಇಲ್ಲೊಂದರಂತೆ ಮೆಕ್ಕೆಜೋಳದ ಸಸಿಗಳು ಹುಟ್ಟಿರುವುದು ಕಂಡುಬಂದಿದೆ. ಗಾಳಿ, ಬಿಸಿಲಿನಿಂದ ಬೆಳೆ ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ. ಬಿತ್ತನೆಬೀಜ, ರಸಗೊಬ್ಬರ ಜತೆಗೆ ಟ್ರ್ಯಾಕ್ಟರ್‌ನಲ್ಲಿ ಬಿತ್ತನೆ ಸೇರಿ ಸಾಕಷ್ಟು ಖರ್ಚು ತಗುಲಿದೆ. ಆದರೆ, ಬಿತ್ತನೆ ನಂತರ ಮಳೆ ಬಾರದೆ ಎಳೆಯ ಸಸಿಗಳು ಹಾಳಾಗುವ ಸ್ಥಿತಿಯಲ್ಲಿವೆ. ಒಂದೆರಡು ದಿನದಲ್ಲಿ ಮಳೆ ಬಂದರೆ ಚೇತರಿಸಿಕೊಳ್ಳುತ್ತವೆ. ಇಲ್ಲದಿದ್ದರೆ ಸಾಲ ಮೈಮೇಲೆ ಬರುತ್ತದೆ ಎಂಬ ಆತಂಕ ರೈತರಲ್ಲಿ ಮೂಡಿದೆ.

ಅಕ್ಕಡಿ ಬೆಳೆಯಾಗಿ ತೊಗರಿ ಬಿತ್ತನೆ: ಮೆಕ್ಕೆಜೋಳದ ನಡುವೆ ಅಕ್ಕಡಿ ಬೆಳೆಯಾಗಿ ತೊಗರಿ ಬಿತ್ತನೆ ಮಾಡಲಾಗಿದೆ. ಅಲ್ಲದೆ, ಮಳೆಯಾದ ಕೂಡಲೆ ಮತ್ತೆ ಅಕ್ಕಡಿ ಸಾಲುಗಳಿಗೆ ನಾಟಿ ಮಾಡಲು ಸಿದ್ಧರಾಗಿದ್ದಾರೆ. ಹಿಂದಿನ ವರ್ಷಗಳಿಗಿಂತ ಈ ಬಾರಿ ದಾವಣಗೆರೆ ತಾಲೂಕಿನಾದ್ಯಂತ ತೊಗರಿಯನ್ನು ಅತಿ ಹೆಚ್ಚು ಬೆಳೆಯುವ ನಿರೀಕ್ಷೆ ಇದೆ ಎನ್ನುತ್ತಾರೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ಶ್ರೀಧರ್‌ಮೂರ್ತಿ.

ರೈತರು ಭೂಮಿಯ ತೇವಾಂಶ ನೋಡಿಕೊಂಡು ಬಿತ್ತನೆ ಮಾಡಬೇಕು. ಬೀಜ ಮೊಳಕೆಯಾಗಿ ಭೂಮಿಯಿಂದ ಮೇಲೆ ಬರುವಷ್ಟಾದರೂ ತೇವಾಂಶ ಇರಬೇಕು. ಇಲ್ಲದಿದ್ದರೆ ಮೊಳಕೆ ಹಂತದಲ್ಲೇ ಸಸಿಗಳು ಸಾಯುತ್ತವೆ. ಜತೆಗೆ ಮೆಕ್ಕೆಜೋಳ ಒಂದೇ ಬೆಳೆ ಹಾಕದೆ, ಅಕ್ಕಡಿ ಬೆಳೆಯಾಗಿ ತೊಗರಿ, ರಾಗಿ, ಜೋಳ ಸಿರಿಧಾನ್ಯಗಳನ್ನು ಬೆಳೆದಲ್ಲಿ ಉತ್ತಮ ಆದಾಯ ಬರುತ್ತದೆ.
l ಡಿ.ಎಂ. ಶ್ರೀಧರ್‌ಮೂರ್ತಿ, ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ.

ದುಬಾರಿ ಬಿತ್ತನೆ ಬೀಜ, ರಸಗೊಬ್ಬರ ಭೂಮಿಗೆ ಹಾಕಿ ರೈತರು ಮಳೆಯೊಂದಿಗೆ ಜೂಜಾಟ ಆಡುವ ಸ್ಥಿತಿ ಉಂಟಾಗಿದೆ. ಆದ್ದರಿಂದ ಸರ್ಕಾರ ರೈತರ ಕೃಷಿ ಸಾಲಗಳನ್ನು ಮನ್ನಾ ಮಾಡಬೇಕು. ಕಳೆದ ವರ್ಷದಂತೆ ಈ ವರ್ಷವೂ ಮುಂಗಾರು ವಿಫಲಗೊಂಡಿದೆ. ಕೂಡಲೇ ಸರ್ಕಾರ ರೈತರ ನೆರವಿಗೆ ಬಂದು ಪರಿಹಾರ ನೀಡಬೇಕು.
l ಪ್ರಕಾಶ್ ನೇರ್ಲಿಗೆ, ಪ್ರಗತಿಪರ ರೈತ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net