ರಾಜ್ಯದಲ್ಲಿ ಸರ್ಕಾರ ನಡೀತಿಲ್ಲ, ಹೇಗೋ ಮ್ಯಾನೇಜ್​ ಮಾಡ್ತಿದ್ದೀವಿ... ಮಾಧುಸ್ವಾಮಿ ಸ್ಫೋಟಕ ಹೇಳಿಕೆ? ಆಡಿಯೋ ವೈರಲ್​

Madhuswamy
Published on

ಬೆಂಗಳೂರು: ತನ್ನದೇ ಸರ್ಕಾರದ ವಿರುದ್ಧ ಸಚಿವ ಮಾಧುಸ್ವಾಮಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್​ ಆಗಿದ್ದು, ರಾಜ್ಯ ಬಿಜೆಪಿಯಲ್ಲಿ ತಲ್ಲಣ ಮೂಡಿಸಿದೆ.

ರೈತರ ಸಮಸ್ಯೆ ಹೇಳಿಕೊಂಡು ಕರೆ ಮಾಡಿದ ಭಾಸ್ಕರ್​ ಎಂಬುವರಿಗೆ 'ರಾಜ್ಯದಲ್ಲಿ ಸರ್ಕಾರ ನಡೆಯುತ್ತಿಲ್ಲ. ಹೇಗೋ ಮ್ಯಾನೇಜ್​ ಮಾಡ್ತಿದ್ದೀವಿ ಅಷ್ಟೆ. ಚುನಾವಣೆ ಬರೋವರೆಗೂ ತಳ್ತಾ ಇದ್ದೀವಿ' ಎಂದು ಮಾಧುಸ್ವಾಮಿ ಅಸಹಾಯಕತೆ ತೋರಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಈ ಆಡಿಯೋ ಅಸಲಿಯೋ-ನಕಲಿಯೋ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.

ಆಡಿಯೋದಲ್ಲಿ ಏನಿದೆ?

ಭಾಸ್ಕರ್​: ನಮಸ್ತೆ ಸರ್​, ನಾನು ಚನ್ನಪಟ್ಟಣದಿಂದ ಸಮಾಜ ಸೇವಕ ಭಾಸ್ಕರ್​ ಅಂತ. ವಿಎಸ್​ಎಸ್​ಎನ್​ ಬ್ಯಾಂಕ್​ನಲ್ಲಿ 50 ಸಾವಿರ ರೂಪಾಯಿ ಸಾಲ ಪಡೆದಿದ್ದಾರೆ ರೈತರು. ಆ ಹಣ ಕಟ್ಟಬೇಕಾದರೆ ರಿನೀವಲ್​ಗೆ ಅಂತ 1,300 ರೂಪಾಯಿಯನ್ನ ಬ್ಯಾಂಕ್​ ಸಿಬ್ಬಂದಿಗಳು ತಗೊಂಡು ಅವರೇ ಬಡ್ಡಿಗೆ ಅಂತ ಹಣ ಇಟ್ಕೊತ್ತಿದ್ದಾರೆ.

ಮಾಧುಸ್ವಾಮಿಯದ್ದು ಎನ್ನಲಾದ ಧ್ವನಿ: ಏನಪ್ಪ ಮಾಡ್ಲಿ... ಇದೆಲ್ಲ ನನಗೆ ಗೊತ್ತು, ಬಡ್ಡಿ ಹೊಡ್ಕೊಂಡು ತಿಂತಾರೆ ಅಂತ ಸನ್ಮಾನ್ಯ ಸೋಮಶೇಖರ್​ ಅವರ ಗಮನಕ್ಕೂ ತಂದಿದ್ದೇನೆ. ಅವರೇನು ಕ್ರಮ ಜರುಗಿಸ್ತಾ ಇಲ್ವಲ್ಲಾ... ಏನ್​ ಮಾಡೋದು?

ಭಾಸ್ಕರ್​: ರೈತರನ್ನ ಬ್ಯಾಂಕ್​ನವರು ಮಂಗನಂತೆ ಮಾಡಿಬಿಟ್ಟಿದ್ದಾರೆ ನೋಡಿ ಸರ್

ಮಾಧುಸ್ವಾಮಿಯದ್ದು ಎನ್ನಲಾದ ಧ್ವನಿ: ನಾನೇ ಕಟ್ಟಿದ್ದೀನಿ ಮಾರಾಯಾ, ರೈತರಲ್ಲ ನನ್ನ ಅತ್ರನೂ ತಗೊಂಡವ್ರೇ...

ಭಾಸ್ಕರ್​: ನೋಡಿ ಸರ್​ ಇದೆಲ್ಲಾ ನೋಡೋಕೆ ಸರಿ ಕಾಣ್ಸಲ್ಲ...

ಮಾಧುಸ್ವಾಮಿಯದ್ದು ಎನ್ನಲಾದ ಧ್ವನಿ: ಸರ್ಕಾರ ನಡೀತಾ ಇಲ್ಲ ಇಲ್ಲಿ, ಮ್ಯಾನೇಜ್​ಮೆಂಟ್​​ ಮಾಡ್ತಿದ್ದೀವಿ ಅಷ್ಟೆ. ತಳ್ಳಿದ್ರೆ ಸಾಕು ಇನ್ನು 8 ತಿಂಗಳು ಅಂತ ತಳ್ತಾ ಇದ್ದೀವಿ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net