ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಶರಣಾದ ಪ್ರಿಯಕರ

Murder 1
Published on

ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಯುವತಿ ಸಾವು

ಮನೆಯ ಬಾವಿಯಲ್ಲಿ ಶವವಾಗಿ ಪತ್ತೆಯಾದ ಯುವಕ

* ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆ ಬಳಿ ಘಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಮದುವೆಗೆ ಯುವತಿ ಹಾಗೂ ಆಕೆಯ ಮನೆಯವರು ನಿರಾಕರಿಸಿದ ಹಿನ್ನೆಲೆಯಲ್ಲಿ ಯುವಕನೋರ್ವ ಪ್ರೇಯಸಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದು, ಬಳಿಕ ಆತ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆ ಗ್ರಾಮದಲ್ಲಿ ಸೆಪ್ಟೆಂಬರ್​ 12ರಂದು ನಡೆದಿದೆ.

ಪೂಜಾರಿಬೆಟ್ಟು ನಿವಾಸಿ ರಕ್ಷಿತಾ ಸುರೇಶ ಪೂಜಾರಿ (24) ಮೃತ ಯುವತಿಯಾಗಿದ್ದು, ಚೂರಿಯಿಂದ ಇರಿತ ಮಾಡಿದ್ದಾನೆ ಎನ್ನಲಾದ ಪಕ್ಕದ ಮನೆಯ ಯುವಕ ಚೆಗರಿಬೆಟ್ಟು ನಿವಾಸಿ ಕಾರ್ತಿಕ ಪೂಜಾರಿ (26) ಎಂಬಾತನ ಶವ ಆತನ ಮನೆಯ ಸಮೀಪದ ಬಾಯಿಯಲ್ಲಿ ಪತ್ತೆಯಾಗಿದೆ.

ಘಟನೆ ವಿವರ

ರಕ್ಷಿತಾಳನ್ನು ಪಕ್ಕದ ಮನೆಯ ಯುವಕ ಕಾರ್ತಿಕ ಪೂಜಾರಿ ಎಂಬಾತ ಕೆಲ ವರ್ಷದಿಂದ ಪ್ರೀತಿಸುತ್ತಿದ್ದನು. ಅಲ್ಲದೆ, ಮದುವೆಯಾಗುವಂತೆ ಪದೇಪದೆ ಪೀಡಿಸುತ್ತಿದ್ದ ಎಂದೂ ತಿಳಿದು ಬಂದಿದೆ. ಆದರೆ, ಆತನನ್ನು ಮದುವೆಯಾಗಲು ಯುವತಿ ಕುಟುಂಬದವರು ಒಪ್ಪಿರಲಿಲ್ಲ. ಹೀಗಾಗಿ ಕಳೆದ ಎರಡು ವಾರದಿಂದ ಯುವತಿ ಆತನ ಮೊಬೈಲ್​ ಕಾಲ್​ಅನ್ನು ಬ್ಲಾಕ್​ ಮಾಡಿದ್ದಳು ಎಂದು ತಿಳಿದುಬಂದಿದೆ.

ಜನ್ಮದಿನದಂದೇ ಸಾವು!

ಮೃತಪಟ್ಟ ಯುವತಿ ರಕ್ಷಿತಾಳ ಜನ್ಮದಿನವೂ ಇಂದು ಇತ್ತು. ಸರ್ವೇ ಇಲಾಖೆಯಲ್ಲಿ ಗುತ್ತಿಗೆ ಕೆಲಸಗಾರಳಾಗಿದ್ದ ರಕ್ಷಿತಾ, ತನ್ನ ಮನೆಯಿಂದ ಬಸ್​ ನಿಲ್ದಾಣದ ಕಡೆ ಬೆಳಗ್ಗೆ 9 ಗಂಟೆಯ ವೇಳೆಗೆ ನಡೆದು ಬರುತ್ತಿದ್ದಳು. ಕೊಕ್ಕರ್ಣೆ ಸಮೀಪದ ಪುಟ್ಟನಕಟ್ಟೆ ಬಳಿ ಆಗಮಿಸಿದ ಯುವಕ, ಜನ್ಮದಿನದ ಶುಭಾಶಯ ಹೇಳಲು ಬಂದಿದ್ದು, ಬಳಿಕ ಆಕೆಗೆ ಮನಸೋ ಇಚ್ಛೆ ಚಾಕುವಿನಿಂದ ತಿವಿದು ಪರಾರಿಯಾಗಿದ್ದ.

ಯುವತಿಗೆ ತೀವ್ರ ಗಾಯ

ಯುವತಿಯ ಕುತ್ತಿಗೆ, ಎದೆಯ ಸುತ್ತ, ಪಕ್ಕೆಲುಬಿನ ಬಲ ಮತ್ತು ಎಡ ಭಾಗಗಳಿಗೆ ಚೂರಿಯಿಂದ ಇರಿಯಲಾಗಿದೆ. ತೀವ್ರಗಾಯಗೊಂಡ ಹಾಗೂ ಮಾರಣಾಂತಿಕ ಸ್ಥಿಯಲ್ಲಿದ್ದ ಅವಳನ್ನು ಕೂಡಲೇ ಮಣಿಪಾಲದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು, ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಸಂಜೆ ರಕ್ಷಿತಾ ಮೃತಪಟ್ಟಿದ್ದಾಳೆ.

ಹೆದರಿದ ಯುವಕ ಆತ್ಮಹತ್ಯೆ?

ಯುವತಿಗೆ ಚಾಕು ಇರಿತ ಬಳಿಕ ಪಕ್ಕದ ಮನೆಯ ಯುವಕ ನಾಪತ್ತೆಯಾಗಿದ್ದ. ಆತನೇ ಚಾಕುವಿನಿಂದ ಇರಿತ ಮಾಡಿದ್ದಾನೆಂಬ ಶಂಕೆ ಹಿನ್ನೆಲೆಯಲ್ಲಿ ಬ್ರಹ್ಮಾವರ ಠಾಣೆ ಪೊಲೀಸರು ಆತನ ಪತ್ತೆಗೆ ಬಲೆ ಬೀಸಿದ್ದರು. ಸಂಜೆಯವರೆಗೂ ಆತನ ಪತ್ತೆ ಆಗಿರಲಿಲ್ಲ. ಆದರೆ, ಸಮೀಪದ ಬಾವಿಯಲ್ಲೇ ಆತನ ಶವ ಪತ್ತೆಯಾಗಿದ್ದು, ಯುವತಿಗೆ ಚಾಕು ಹಾಕಿದ ಬಳಿಕ ಹೆದರಿ, ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

ಸ್ಥಳದಲ್ಲಿ ಯುವಕನ ಬೈಕ್​ ಪತ್ತೆ

SP
ಘಟನೆಯ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್​ ವರಿಷ್ಠ ಹರಿರಾಂ ಶಂಕರ್​, ಗಾಯಗೊಂಡ ಯುವತಿ ರಕ್ಷಿತಾ ಆಸ್ಪತ್ರೆಯಲ್ಲಿ ಸಂಜೆ ಮೃತಪಟ್ಟಿದ್ದು, ಆರೋಪಿ ಯುವಕನ ಶವವೂ ಸಹ ಆತನ ಮನೆಯ ಸಮೀಪದ ಬಾವಿಯಲ್ಲಿ ಪತ್ತೆಯಾಗಿದೆ. ಬೆಳಗ್ಗೆ ಚೂರಿ ಇರಿತದ ಘಟನಾ ಸ್ಥಳದಲ್ಲಿ ಯುವತಿ ರಕ್ಷಿತಾಳೊಂದಿಗೆ ಅಪ್ರಾಪ್ತ ಬಾಲಕಿಯೂ ಸಹ ನಡೆದು ಬಂದಿದ್ದಳು. ಆರೋಪಿ ಕಾರ್ತಿಕ ಆ ಹುಡುಗಿಯನ್ನು ಹೆದರಿಸಿ ಓಡಿಸಿದ್ದಾನೆ. ಬಳಿಕ ರಕ್ಷಿತಾಳಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಘಟನಾ ಸ್ಥಳದಲ್ಲಿ ಆರೋಪಿಯ ಬೈಕ್​ ಹಾಗೂ ಕೃತ್ಯಕ್ಕೆ ಬಳಸಿದ್ದ ಚಾಕು ಲಭಿಸಿದ್ದು ವಶಕ್ಕೆ ಪಡೆದಿದ್ದೇವೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಮಾಹಿತಿ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net