ಶಿಕ್ಷಕರ ಮೇಲಿದೆ ಹೆಚ್ಚು ಹೊಣೆಗಾರಿಕೆ

mysore
Published on

ಮೈಸೂರು: ವಿದ್ಯಾರ್ಥಿಗಳನ್ನು ಜ್ಞಾನದಾಹಿಗಳನ್ನಾಗಿ ಮಾಡುವುದೇ ನಿಜವಾದ ಶಿಕ್ಷಕರ ಕೆಲಸ ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅಧ್ಯಕ್ಷ ಪ್ರೊ.ಎಂ.ಜಗದೀಶ್ ಕುಮಾರ್ ಹೇಳಿದರು.


ನಗರದಲ್ಲಿ ಸೋಮವಾರ ಆಯೋಜಿಸಿದ್ದ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ 14ನೇ ಘಟಿಕೋತ್ಸವದಲ್ಲಿ ಮಾತನಾಡಿದರು.
ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಕರ ಹೊಣೆಗಾರಿಕೆ ಹೆಚ್ಚಿದೆ. ಕೇವಲ ಪಾಠಪ್ರವಚನ ಮಾಡುವುದು ಶಿಕ್ಷಕರ ಕಾಯಕವಲ್ಲ. ಅವರು ತಮ್ಮ ವಿಷಯದ ಬಗ್ಗೆ ಆಳವಾದ ಜ್ಞಾನವನ್ನು ಪಡೆದುಕೊಳ್ಳಬೇಕು. ಸಾಕಷ್ಟು ಅನುಭವ ಇರಬೇಕು ಎಂದು ಹೇಳಿದರು.


ರಾಮಾಯಣದಲ್ಲಿ ಹೇಗೆ ಜಾಂಬವಂತನು ಹನುಮಂತನಿಗೆ ಲಂಕೆಗೆ ತೆರಳಲು ಪ್ರೋತ್ಸಾಹಿಸಿದನೋ ಅದೇ ರೀತಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಮತ್ತು ಮಾರ್ಗದರ್ಶನ ನೀಡುವ ಕೆಲಸವನ್ನು ಶಿಕ್ಷಕರು ಮಾಡಬೇಕು ಎಂದರು.


ಜಗತ್ತಿನ 5ನೇ ಆರ್ಥಿಕ ದೊಡ್ಡ ರಾಷ್ಟ್ರವಾಗಿ ಭಾರತ ರೂಪುಗೊಂಡಿದೆ. ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿದೆ. ಔಷಧ ಉತ್ಪಾದನೆಯಲ್ಲಿ ಜಗತ್ತಿನ 3ನೇ ದೇಶವಾಗಿದೆ. ಹೀಗೆ ಭಾರತ ಬಹುದೊಡ್ಡ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಎಲ್ಲ ಲಕ್ಷಣಗಳೂ ಇವೆ. ಆದ್ದರಿಂದ ವಿದ್ಯಾರ್ಥಿಗಳು ಬಹುಶಿಸ್ತೀಯ ಅಧ್ಯಯನದ ಮೂಲಕ 2047ರ ಹೊತ್ತಿಗೆ ಭಾರತವನ್ನು ಪ್ರಗತಿ ಹೊಂದಿದ ದೇಶವಾಗಿ ರೂಪಿಸಲು ನೆರವಾಗಬೇಕು ಎಂದರು.


2047ರ ವೇಳೆಗೆ ಭಾರತವನ್ನು ಅಭಿವೃದ್ಧಿಶೀಲ ರಾಷ್ಟ್ರವನ್ನಾಗಿಸಬೇಕು ಎಂಬ ಸಂಕಲ್ಪ ಇದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಕೊಡುಗೆ ಅಪಾರ. ಭವಿಷ್ಯದಲ್ಲಿ ದೇಶಾಭಿವೃದ್ಧಿಗೆ ಪೂರಕವಾದ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.


ಯುವಜನರು ಸ್ಥಳೀಯ ಮತ್ತು ಜಾಗತಿಕವಾದ ಸವಾಲು ಎದುರಿಸಲು ಸಜ್ಜಾಗಬೇಕು. ಅದಕ್ಕೆ ತಕ್ಕಂತೆ ಔದ್ಯೋಗಿಕ ಕೌಶಲ, ವೃತ್ತಿ ಕೌಶಲ, ವೈಯಕ್ತಿಕ ಕೌಶಲವನ್ನು ಮೈಗೂಡಿಸಿಕೊಳ್ಳಬೇಕು. ಆಗ ಮಾತ್ರ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಮತ್ತು ಗುರಿ ಸಾಧಿಸಲು ಅನುಕೂಲವಾಗಲಿದೆ. ಇಲ್ಲವಾದರೆ ವೃತ್ತಜೀವನದಲ್ಲಿ ಹಿನ್ನಡೆಯಾಗಲಿದೆ ಎಂದು ಎಚ್ಚರಿಸಿದರು.


ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ, ಸಮ ಕುಲಾಧಿಪತಿ ಡಾ.ಬಿ.ಸುರೇಶ್, ಕುಲಪತಿ ಡಾ.ಸುರೀಂದರ್ ಸಿಂಗ್, ಕುಲಸಚಿವ ಡಾ.ಬಿ.ಮಂಜುನಾಥ್, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಆರ್. ಸುಧೀಂದ್ರ ಭಟ್ ಇದ್ದರು.


ಪದವಿ ಪ್ರದಾನ:

ಘಟಿಕೋತ್ಸವದಲ್ಲಿ 2,546 ವಿದ್ಯಾರ್ಥಿಗಳಿಗೆ ವಿವಿಧ ಪದವಿ ಪ್ರದಾನ ಮಾಡಲಾಯಿತು. ವಿವಿಧ ವಿಷಯಗಳಲ್ಲಿ 1,022 ಪುರುಷರು, 1,524 ಮಹಿಳಾ ವಿದ್ಯಾರ್ಥಿಗಳು ವಿವಿಧ ಪದವಿ ಸ್ವೀಕರಿಸಿದರು. 49 ವಿದ್ಯಾರ್ಥಿಗಳಿಗೆ ಪಿಎಚ್‌ಡಿ, 55 ವಿದ್ಯಾರ್ಥಿಗಳಿಗೆ 84 ಚಿನ್ನದ ಪದಕ ಪ್ರದಾನ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net