‘ಗ್ರಾಮಾಭಿವೃದ್ಧಿ’ಗೆ ಮೆಚ್ಚುಗೆಯ ಮಹಾಪೂರ

20 HANUR 1
ಹನೂರಿನಲ್ಲಿ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಕುರಿತು ಹೊರ ತಂದಿರುವ ಗ್ರಾಮಾಭಿವೃದ್ಧಿ ವಿಶೇಷ ಪುರವಣಿಯನ್ನು ಗುರುಪ್ರಸಾದ್ ಬಿಡುಗಡೆ ಮಾಡಿದರು.ಎಂ.ಆರ್. ಸತ್ಯನಾರಾಯಣ, ಶಿವರಾಜು, ರವೀಂದ್ರ, ಕಂದವೇಲು, ಸವಿತಾ, ದೊರೆಯಾ ಇದ್ದರು.
Published on

ಹನೂರು : ಗ್ರಾಮಾಭಿವೃದ್ಧಿಗೆ ಸಂಬಂಧಿಸಿದಂತೆ ವಿಶೇಷ ಪುರವಣಿಯನ್ನು ಹೊರ ತರುವುದರ ಮೂಲಕ ವಿಜಯವಾಣಿ ಪತ್ರಿಕೆ ಗ್ರಾಮ ಮಟ್ಟದಲ್ಲಿ ದಾಪುಗಾಲು ಇಟ್ಟಿದ್ದು, ಜನರಲ್ಲಿ ಜಾಗೃತಿ ಮೂಡಿಸುತ್ತಿದೆ ಎಂದು ತಹಸೀಲ್ದಾರ್ ವೈ.ಕೆ.ಗುರುಪ್ರಸಾದ್ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಶನಿವಾರ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ವತಿಯಿಂದ ಆಯೋಜಿಸಿದ್ದ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಕುರಿತ ಗ್ರಾಮಾಭಿವೃದ್ಧಿ ವಿಶೇಷ ಪುರವಣಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗಾಂಧೀಜಿ ಅವರು ಸ್ವರಾಜ್ಯದ ಕನಸು ಕಂಡಿದ್ದರು. ಹಳ್ಳಿಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾದಂತೆ ಎಂಬುದನ್ನು ಮನಗಂಡಿದ್ದರು. ಈ ದಿಸೆಯಲ್ಲಿ ಆಡಳಿತ ಎಲ್ಲ ಸರ್ಕಾರಗಳು ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದೆ. ಈ ಹಿಂದೆ ಗ್ರಾಮಗಳಲ್ಲಿ ಕುಡಿಯುವ ನೀರು, ರಸ್ತೆ, ವಿದ್ಯುತ್ ಇನ್ನಿತರ ಮೂಲಸೌಕರ್ಯ ಕೊರತೆ ಇತ್ತು. ಆದರೆ 1993ರಲ್ಲಿ ಪಂಚಾಯತ್ ರಾಜ್ ಕಾಯ್ದೆ ಜಾರಿಯಾದ ಬಳಿಕ ಗ್ರಾಮಗಳಲ್ಲಿ ಮೂಲಸೌಕರ್ಯಗಳ ಜತೆಗೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಹಾಗಾಗಿ ಗ್ರಾಮಾಭಿವೃದ್ಧಿಯಲ್ಲಿ ಅಮೂಲಾಗ್ರ ಬದಲಾವಣೆಯಾಗಿದೆ. ಇದಕ್ಕೆ ಗ್ರಾಮ ಪಂಚಾಯಿತಿಗಳ ಶ್ರಮ ಅಪಾರ. ಈ ದಿಸೆಯಲ್ಲಿ ಸರ್ಕಾರಗಳು ಅನುಷ್ಠಾನಕ್ಕೆ ತಂದ ಯೋಜನೆಗಳನ್ನು ಗ್ರಾಪಂಗಳು ಎಷ್ಟರ ಮಟ್ಟಿಗೆ ಕಾರ್ಯಗತಗೊಳಿಸಿದೆ, ಜತೆಗೆ ಅಧಿಕಾರಿಗಳ ಕರ್ತವ್ಯ ಏನೆಂಬುದನ್ನು ವಿಜಯವಾಣಿ ಪತ್ರಿಕೆ ವಿಶೇಷ ಪುರವಣಿ ಮೂಲಕ ಹೊರ ತಂದಿರುವುದು ಶ್ಲಾಘನೀಯ. ಈ ಪುರವಣಿ ಹಿಂದುಳಿದ ಗ್ರಾಮಗಳು ಅಭಿವೃದ್ಧಿ ಹೊಂದಲು ಸಹಾಯಕ ಹಾಗೂ ಸ್ಫೂರ್ತಿದಾಯಕವಾಗಿದೆ ಎಂದು ತಿಳಿಸಿದರು.

ಸುದ್ದಿಯಲ್ಲ, ಮಾಹಿತಿ ಕಣಜ: ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಶಿವರಾಜು ಮಾತನಾಡಿ, ವಿಜಯವಾಣಿ ಪತ್ರಿಕೆ ಹೊರ ತಂದಿರುವ ಈ ವಿಶೇಷ ಪುರವಣಿ ಗ್ರಾಮವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮಾರ್ಗದರ್ಶಿಯಾಗಿದೆ. ಅಲ್ಲದೇ ಗ್ರಾಪಂಗಳಿಗೆ ಸ್ಫೂರ್ತಿದಾಯಕವಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ಸಹಕಾರಿಯಾಗಿದೆ. ಇದು ಖುಷಿಯ ವಿಚಾರ. ಹಾಗಾಗಿ ಗ್ರಾಪಂ ಅಧಿಕಾರಿಗಳು ಗ್ರಾಮದ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಇನ್ನು ಈ ಪುರವಣಿಯು ಉತ್ತಮ ಭಾಷಾಶೈಲಿಯಲ್ಲಿ ಮುದ್ರಿತವಾಗಿದ್ದು, ಸರಳ ಭಾಷೆಯಲ್ಲಿ ಅರ್ಥೈಸಲಾಗಿದೆ. ಇದರಿಂದ ಜನಸಾಮಾನ್ಯರು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದಾಗಿದೆ. ಇತ್ತ ತಾಲೂಕಿನ ಸಂಪೂರ್ಣ ಮಾಹಿತಿಯನ್ನು ಈ ಪುರವಣಿ ಒಳಗೊಂಡಿದ್ದು, ಜನರು ತಿಳಿದುಕೊಳ್ಳಲು ಸಹಕಾರಿಯಾಗಿದೆ. ಹಾಗಾಗಿ ಪುರವಣಿಯಲ್ಲಿನ ಪ್ರತಿಯೊಂದು ವಸ್ತು ವಿಷಯವು ಸುದ್ದಿಯಲ್ಲ. ಬದಲಾಗಿ ಮಾಹಿತಿ ಕಣಜವಾಗಿದೆ. ಪತ್ರಿಕೆ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು ಎಂದು ಆಶಿಸಿದರು.

ತಾಪಂ ಪರವಾಗಿ ಅಭಿನಂದನೆ: ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ರವೀಂದ್ರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕೆಲವೊಂದು ಪತ್ರಿಕೆಗಳು ಗ್ರಾಪಂಗೆ ಸಂಬಂಧಿಸಿದಂತೆ ಋಣಾತ್ಮಕ ಸುದ್ದಿಗಳಿಗೆ ಹೆಚ್ಚಿನ ಒತ್ತು ನೀಡುತ್ತಿರುವುದನ್ನು ಕಾಣುತ್ತಿದ್ದೇವೆ. ಆದರೆ ವಿಜಯವಾಣಿ ಪತ್ರಿಕೆ ಗ್ರಾಮದ ಅಭಿವೃದ್ಧಿಯತ್ತ ದೃಷ್ಟಿ ಹರಿಸಿದ್ದು, ವಿಶೇಷ ಪುರವಣಿಯನ್ನು ಹೊರ ತಂದಿರುವುದು ಮೆಚ್ಚುಗೆಯ ಸಂಗತಿ. ಈ ಮೂಲಕ ಪತ್ರಿಕೆ ಸಾಮಾಜಿಕ ಕಳಕಳಿಯನ್ನು ಉಳಿಸಿಕೊಂಡಿದೆ. ಜನಮಾನಸದಲ್ಲಿ ಉಳಿಯುವಂತೆ ಮಾಡಿದೆ. ಈ ದಿಸೆಯಲ್ಲಿ ತಾಲೂಕು ಪಂಚಾಯಿತಿ ಪರವಾಗಿ ಪತ್ರಿಕೆಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು.

ಈ ಹಿಂದೆ ಗ್ರಾಮಗಳಲ್ಲಿ ಗ್ರಂಥಾಲಯಗಳಲ್ಲಿ ಮೂಲಸೌಕರ್ಯ ಕೊರತೆ ಇತ್ತು. ಆದರೀಗ ಗ್ರಂಥಾಲಯಗಳ ನಿರ್ವಹಣೆಯನ್ನು ಗ್ರಾಪಂ ವ್ಯಾಪ್ತಿಗೆ ಒಳಪಡಿಸಿರುವುದರಿಂದ ಓದುಗರನ್ನು ಆಕರ್ಷಿಸುತ್ತಿದೆ. ಗ್ರಾಪಂ ನಿರ್ವಹಣೆಯಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಇತ್ತ ಗ್ರಾಪಂ ವತಿಯಿಂದ ಕೂಸಿನ ಮನೆಯನ್ನು ಆರಂಭಿಸಿರುವುದು ನರೇಗಾ ಯೋಜನೆಯಡಿ ಉದ್ಯೋಗ ಪಡೆಯುವ ಮಹಿಳೆಯರ ಕಂದಮ್ಮಗಳ ಲಾಲನೆ, ಪಾಲನೆಗೆ ಅನುಕೂಲವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವಿಜಯವಾಣಿ ಮೈಸೂರು ಬ್ಯೂರೋ ಸ್ಥಾನಿಕ ಸಂಪಾದಕ ಎಂ.ಆರ್. ಸತ್ಯನಾರಾಯಣ ಪ್ರಸ್ತಾವಿಕವಾಗಿ ಮಾತನಾಡಿದರು. ಶಿಕ್ಷಣ ಸಂಯೋಜಕರಾದ ಕಿರಣ್‌ಕುಮಾರ್, ಕಂದವೇಲು, ಚಿನ್ನಪ್ಪಯ್ಯ, ಪಪಂ ಸದಸ್ಯ ಸುದೇಶ್, ಕುರಟ್ಟಿ ಹೊಸೂರು ಗ್ರಾಪಂ ಉಪಾಧ್ಯಕ್ಷ ರಾಜಾರಾಮ್, ಸದಸ್ಯರಾದ ಸರದಾರ್, ದೊಡ್ಡೇಗೌಡ, ಪ್ರಕಾಶ್, ಮಂಗಲ ಗ್ರಾಪಂ ಪಿಡಿಒ ದೊರೆಯಾ, ನೌಕರ ವಸಂತ್‌ಕುಮಾರ್, ಮುಖಂಡರಾದ ನಟರಾಜು, ಗೋಪಾಲ್, ಮಹದೇವ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿಗಳು, ತಾಪಂ ಅಧಿಕಾರಿಗಳು, ನೌಕರರು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net