ದಿನದಲ್ಲಿ 150 ಯೂನಿಟ್ ರಕ್ತ ಕೊರತೆ

nrp punith
ಎನ್.ಆರ್.ಪುರ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಜೇಸಿ ಮಾಜಿ ಅಧ್ಯಕ್ಷ ಪಿ.ಆರ್.ಸುಕುಮಾರ್ ಚಾಲನೆ ನೀಡಿದರು. ಧರಣೇಂದ್ರ ದಿನಕರ್, ಅಭಿನವ ಗಿರಿರಾಜ್, ಎಂ.ಪಿ.ಮನು, ರವಿಚಂದ್ರ, ಸಿ.ಮನೋಹರ್, ವಿದ್ಯಾ ನಂದಕುಮಾರ್,ನವೀನ್ ಇತರರಿದ್ದರು.
Published on

ಎನ್.ಆರ್.ಪುರ: ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ದಿನಕ್ಕೆ 350 ಯೂನಿಟ್ ರಕ್ತದ ಅವಶ್ಯಕತೆ ಇದೆ. ಆದರೆ 150 ರಿಂದ 200 ಯೂನಿಟ್ ರಕ್ತ ಮಾತ್ರ ಸಿಗುತ್ತಿದೆ ಎಂದು ಶಿವಮೊಗ್ಗ ಸಂಜೀವಿನ ರಕ್ತ ನಿಧಿ ಕೇಂದ್ರದ ಹಿರಿಯ ಸಹಾಯಕ ಧರಣೇಂದ್ರ ದಿನಕರ್ ತಿಳಿಸಿದರು.

ಭಾನುವಾರ ಬಸ್ ನಿಲ್ದಾಣದಲ್ಲಿ ನಟ ಪುನೀತ್ ರಾಜಕುಮಾರ್ ಜನ್ಮ ದಿನಾಚರಣೆಗಾಗಿ ಅಭಿನವ ಪ್ರತಿಭಾ ವೇದಿಕೆ, ಶಿವಮೊಗ್ಗ ರೆಡ್ ಕ್ರಾಸ್ ಸಂಸ್ಥೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ಆರೋಗ್ಯವಂತ 18 ವರ್ಷದಿಂದ 64 ವರ್ಷದವರು ರಕ್ತದಾನ ಮಾಡಬಹುದು. ರಕ್ತದಾನದಿಂದ ನೆನಪಿನ ಶಕ್ತಿ ಜಾಸ್ತಿಯಾಗಲಿದೆ. ಹೃದಯ ರೋಗ ಬರುವುದಿಲ್ಲ. ಬಿಪಿ ಹಾಗೂ ಶುಗರ್ ಕಡಿಮೆಯಾಗಲಿದೆ ಎಂದರು.
ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಮಾಜಿ ಅಧ್ಯಕ್ಷ ಪಿ.ಆರ್.ಸುಕುಮಾರ್ ಮಾತನಾಡಿ, ಪುನೀತ್ ರಾಜ್‌ಕುಮಾರ್ ಯುವಕರಿಗೆ ಸ್ಫೂರ್ತಿಯಾಗಿದ್ದರು. ಅವರ ಜನ್ಮ ದಿನಾಚರಣೆಗೆ ರಕ್ತದಾನ ಶಿಬಿರ ಆಯೋಜಿಸಿರುವುದು ಮಾದರಿ ಎಂದು ಹೇಳಿದರು.
ಎಂ.ಶ್ರೀನಿವಾಸ್ ಅಭಿಮಾನಿ ಬಳಗದ ಅಧ್ಯಕ್ಷ ಪ್ರಶಾಂತ್ ಎಲ್. ಶೆಟ್ಟಿ ಮಾತನಾಡಿ, ಕರೊನಾ ಸಂದರ್ಭದಲ್ಲಿ ರಕ್ತದ ಮಹತ್ವ ಗೊತ್ತಾಯಿತು. ರಕ್ತದಾನವೇ ಶ್ರೇಷ್ಠ ಎಂದರು. ಮುತ್ತಿನಕೊಪ್ಪ ಜನಜಾಗೃತಿ ವೇದಿಕೆ ಅಧ್ಯಕ್ಷ ಸಿ.ಮನೋಹರ್ ಮಾತನಾಡಿ, ನಮ್ಮ ಸಂಸ್ಥೆಯಿಂದ 9 ವರ್ಷಗಳಿಂದ ರಕ್ತದಾನ ಶಿಬಿರ ಏರ್ಪಡಿಸುತ್ತಿದ್ದೇವೆ ಎಂದು ಹೇಳಿದರು.
ಶಿವಮೊಗ್ಗ ರೆಡ್ ಕ್ರಾಸ್ ಸಂಸ್ಥೆ ಖಜಾಂಚಿ ನವೀನ್ ಮಾತನಾಡಿ, 20 ವರ್ಷದಿಂದಲೂ ಎನ್.ಆರ್.ಪುರದಲ್ಲಿ ರಕ್ತದಾನ ಶಿಬಿರ ನಡೆಯುತ್ತಿದ್ದು, ರೆಡ್ ಕ್ರಾಸ್ ಸಂಸ್ಥೆಯಿಂದ ಎಲ್ಲ ಸಹಕಾರ ನೀಡುತ್ತಿದ್ದೇವೆ. ದಾನದಿಂದ ಬಂದ ರಕ್ತವನ್ನು 3 ವಿಭಾಗ ಮಾಡಿ ದಾನವಾಗಿ ನೀಡುತ್ತೇವೆ. ಆದರೆ ರಕ್ತವನ್ನು ವಿಂಗಡಿಸಿ, ಸುರಕ್ಷಿತವಾಗಿ ರಕ್ಷಿಸುವ ಪ್ರಕ್ರಿಯೆಯ ಖರ್ಚನ್ನು ಮಾತ್ರ ರೋಗಿಗಳು ನೀಡಬೇಕು ಎಂದು ತಿಳಿಸಿದರು.
100ನೇ ಬಾರಿ ರಕ್ತದಾನ ಮಾಡಿದ ಅಭಿನವ ಗಿರಿರಾಜ್ ಅವರನ್ನು ಸನ್ಮಾನಿಸಲಾಯಿತು. ಶಿಬಿರದಲ್ಲಿ 20 ಮಹಿಳೆಯರು ಸೇರಿ 60 ಜನರು ರಕ್ತದಾನ ಮಾಡಿದರು.
ರೆಡ್‌ಕ್ರಾಸ್ ಸಂಸ್ಥೆ ಕಾರ್ಯದರ್ಶಿ ಮಂಜುನಾಥ್ ಅಪ್ಪಾಜಿ, ರೋಟರಿ ಕ್ಲಬ್ ಅಧ್ಯಕ್ಷ ಕಿರಣ್, ಕಾರ್ಯದರ್ಶಿ ವಿದ್ಯಾ ನಂದಕುಮಾರ್, ಜೇಸಿ ಅಧ್ಯಕ್ಷ ಎಂ.ಪಿ.ಮನು, ಕಾರ್ಯದರ್ಶಿ ವಿನೂತ್, ಲಯನ್ಸ್ ಕ್ಲಬ್ ಅಧ್ಯಕ್ಷ ರವಿಚಂದ್ರನ್, ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ಅಧ್ಯಕ್ಷ ಮಧುಸೂದನ್,ತಿರುಮಲ ಗೆಳೆಯರ ಬಳಗದ ಅಧ್ಯಕ್ಷ ರಜತ್, ತಾಪಂ ಅಧಿಕಾರಿ ಮನೀಶ್, ಮುಖಂಡರಾದ ರಾಜಕುಮಾರ್, ಎ.ಸಿ.ಶ್ರೀನಿವಾಸ್, ಸುಬ್ರಹ್ಮಣ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net