

ಬಣಕಲ್: ಚಾರ್ಮಾಡಿ ಘಾಟ್‌ನಲ್ಲಿ ದಟ್ಟ ಮಂಜು ಕವಿದ ಕಾರಣದಿಂದಾಗಿ ಶನಿವಾರ ತಡರಾತ್ರಿ ಲಾರಿ ಸೋಮನಕಾಡು ಕಣಿವೆ ಪ್ರಪಾತಕ್ಕೆ ಉರುಳಿದ್ದು, ಚಾಲಕ ಹಾಗೂ ನಿರ್ವಾಹಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶನಿವಾರ ತಡರಾತ್ರಿ ಪುತ್ತೂರಿನಿಂದ ಚಿತ್ರದುರ್ಗಕ್ಕೆ ಕುಡಿಯುವ ನೀರಿನ ಬಾಟಲಿ ಹೊತ್ತು ಸಾಗುತ್ತಿದ್ದ ಲಾರಿ ದಟ್ಟ ಮಂಜು ಕವಿದಿದ್ದರಿಂದ ದಾರಿ ಕಾಣದೆ ಸೋಮನಕಾಡು ಕಣಿವೆ ಪ್ರಪಾತಕ್ಕೆ ಉರುಳಿದೆ. ಪ್ರಪಾತದಲ್ಲಿದ್ದ ಮರವೊಂದಕ್ಕೆ ತಾಗಿ ಲಾರಿ ನಿಂತ ಪರಿಣಾಮ ನೂರಾರು ಅಡಿ ಆಳಕ್ಕೆ ಲಾರಿ ಉರುಳುವುದು ತಪ್ಪಿತು. ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಾರ್ಮಾಡಿ ಘಾಟ್ ನಲ್ಲಿ ಮಂಜು ಕವಿದ ವಾತಾವರಣ ಹೆಚ್ಚಿರುವುದರಿಂದ ರಸ್ತೆ ಕಾಣದೇ ಅಪಘಾತಗಳು ಸಂಭವಿಸುವ ಸಾಧ್ಯತೆ ಇರುವುದರಿಂದ ವಾಹನ ಸವಾರರು ನಿಧಾನವಾಗಿ ವಾಹನ ಚಲಾಯಿಸಬೇಕು .ಕೆಲವೆಡೆ ತಡೆಗೋಡೆ ಕೂಡ ಕುಸಿದಿರುವುದರಿಂದ ಚಾಲಕರು ಎಚ್ಚರ ವಹಿಸಬೇಕು ಎಂದು ಬಣಕಲ್ ಠಾಣಾ ಪಿಎಸ್‌ಐ ಜಂಬೂರಾಜ್ ಮಹಾಜನ್ ತಿಳಿಸಿದ್ದಾರೆ.