

ರಾಯಚೂರು: ಸಿಮೆಂಟ್ ಸಾಗಿಸುತ್ತಿದ್ದ ಲಾರಿಗೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಬೆಂಕಿ ಹತ್ತಿದ ಘಟನೆ ನಗರದ ಹೊರವಲಯದ ಬೈಪಾಸ್ ರಸ್ತೆಯಲ್ಲಿ ಬುಧವಾರ ತಡರಾತ್ರಿ ಜರುಗಿದೆ. ಚಾಲಕ ಮತ್ತು ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತೆಲಂಗಾಣದ ಧರ್ಮಾಪುರಂ ಬಿ.ನಾಗಾರ್ಜುನ ಎಂಬುವವರಿಗೆ ಸೇರಿದ ಲಾರಿ ಗೋವಾದಿಂದ ತೆಲಂಗಾಣಕ್ಕೆ ತೆರಳುತ್ತಿರುವಾಗ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿದ್ದು, ಲಾರಿ ಮತ್ತು ಲಾರಿಯಲ್ಲಿದ್ದ ಸಿಮೆಂಟ್ ಸಂಪೂರ್ಣ ಸುಟ್ಟು ಕರಕಲಾಗಿದೆ.
ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದ್ದು, ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.