

ತುಮಕೂರು/ರಾಯಚೂರು: ಶಿರಾ ತಾಲೂಕಿನ ಕಳ್ಳಂಬೆಳ್ಳದ ಬಾಲೆನಹಳ್ಳಿ ಗೇಟ್ ಬಳಿ ಇಂದು(ಗುರುವಾರ) ಬೆಳಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 10ಕ್ಕೇರಿದೆ.
ಪಘಾತದ ರಭಸಕ್ಕೆ ಸ್ಥಳದಲ್ಲೇ 9 ಮಂದಿ ಮೃತಪಟ್ಟಿದ್ದರು. ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಇಬ್ಬರನ್ನು ಬೆಂಗಳೂರಿನ ನಿಮ್ಹಾನ್ಸ್ಗೆ ದಾಖಲಿಸಲಾಗಿತ್ತು. ಈ ಪೈಕಿ ಓರ್ವ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾನೆ. ತುಮಕೂರು ಜಿಲ್ಲಾಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ 13 ಮಂದಿಗೆ ಚಿಕಿತ್ಸೆ ಮುಂದುವರಿದಿದೆ.
ಶಿರವಾರ ತಾಲೂಕಿನ ಕುರಕುಂದಾ ಗ್ರಾಮದ ಸುಜಾತಾ(25) ಮತ್ತು ವಿನೋದ(3), ವಡವಟ್ಟಿ ಗ್ರಾಮದ ಕ್ರೂಸರ್ ಚಾಲಕ ಕೃಷ್ಣಪ್ಪ(25), ಲಕ್ಷ್ಮೀ ಅಲಿಯಾಸ್ ಮೀನಾಕ್ಷಿ(28), ಕಸನದೊಡ್ಡಿ ಗ್ರಾಮದ ಬಸಮ್ಮ(50), ಪ್ರಭು ಸೇರಿ 10 ಮಂದಿ ಮೃತರು. ಮೃತರೆಲ್ಲರೂ ಕೂಲಿ ಕಾರ್ಮಿಕರಾಗಿದ್ದು, ಈ ಪೈಕಿ ಇಬ್ಬರು ಮಕ್ಕಳು. ರಾಯಚೂರು ಜಿಲ್ಲೆಯಿಂದ ಬೆಂಗಳೂರಿಗೆ ಕೂಲಿ ಕೆಲಸ ಅರಸಿ ಕ್ರೂಸರ್ ವಾಹನದಲ್ಲಿ ಗುಳೆ ಹೊರಟ್ಟಿದ್ದರು. ಮಾರ್ಗಮಧ್ಯೆ ಕ್ರೂಸರ್ ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ 10 ಮಂದಿ ಮೃತಪಟ್ಟಿದ್ದಾರೆ.
ಮೃತರ ಪೈಕಿ ನಾಲ್ವರು ಒಂದೇ ಕುಟುಂಬದವರು. ಕುರುಕುಂದಾ ಗ್ರಾಮದ ಸಿದ್ದಣ್ಣ, ಇವರ ಅಕ್ಕ ಸುಜಾತಾ, ಮಾವ ಪ್ರಭು ಮತ್ತು ಸುಜಾತಾ-ಪ್ರಭು ದಂಪತಿಯ ಪುತ್ರ ವಿನೋದ್ ಮೃತ ದುರ್ದೈವಿಗಳು. ಒಂದೇ ಮನೆಯ ನಾಲ್ವರನ್ನ ಕಳೆದುಕೊಂಡು ಕುಟುಂಬಸ್ಥರು ಕಂಗಾಲಾಗಿದ್ದಾರೆ. ಇಡೀ ಕುರುಕುಂದಾ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ.