

ಗುಳೇದಗುಡ್ಡ: ಸಮೀಪದ ಬೂದನಗಡೆ ಗ್ರಾಮದ ಹತ್ತಿರ ಸೋಮವಾರ ಚಲಿಸುತ್ತಿದ್ದ ಬಸ್ಸಿನ ಗಾಲಿಯ ನಟ್‌ಬೋಲ್ಟ್‌ಗಳು ಕಳಚಿಬಿದ್ದು, ನಿಯಂತ್ರಣ ತಪ್ಪಿದ ಪರಿಣಾಮ ಏಕಾಏಕಿ ಬಸ್ ನಿಲ್ಲಿಸಿದ್ದರಿಂದಾಗಿ 75 ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಸೋಮವಾರ ಬೆಳಗ್ಗೆ 8 ಗಂಟೆ ವೇಳೆ ಗುಳೇದಗುಡ್ಡದಿಂದ ಬಾಗಲಕೋಟೆ ಕಡೆಗೆ ಚಲಿಸುತ್ತಿದ್ದ ಗುಳೇದಗುಡ್ಡ ಘಟಕದ ಸಾರಿಗೆ ಬಸ್‌ನಲ್ಲಿ ಅಂದಾಜು 75ಕ್ಕೂ ಹೆಚ್ಚು ಜನರು ಕಿಕ್ಕಿರಿದು ಪ್ರಯಾಣಿಸುತ್ತಿದ್ದರು. ಆದರೆ, ಬೂದನಗಡೆ ಹತ್ತಿರ ದಿಬ್ಬದಿಂದ ಕೆಳಗೆ ಇಳಿಯುವಾಗ ಬಸ್‌ನ ಹಿಂದಿನ ಒಂದು ಗಾಲಿಯ ನಟ್‌ಬೋಲ್ಟ್ ಬಿಚ್ಚಿಬಿದ್ದು, ಬಸ್ ವಾಲುತ್ತಿದ್ದರಿಂದ ಪ್ರಯಾಣಿಕರು ಗಾಬರಿಗೊಂಡು ಕೂಗಾಡಿದ್ದಾರೆ. ಆಗ ಚಾಲಕ ಕೂಡಲೇ ಬಸ್ ನಿಲ್ಲಿಸಿದ್ದರಿಂದ ಅಪಾಯ ತಪ್ಪಿದಂತಾಗಿದೆ.
ಗುಳೇದಗುಡ್ಡ ಡಿಪೋದಿಂದ ಹಳೆಯ ಬಸ್‌ಗಳನ್ನು ಓಡಿಸುತ್ತಿದ್ದು, ಹೀಗಾಗಿ ಇಂಥ ಘಟನೆಗಳು ನಡೆಯುತ್ತಿವೆ. ಪಟ್ಟಣದಿಂದ ನಿತ್ಯ ನೂರಾರು ವಿದ್ಯಾರ್ಥಿಗಳು, ಉದ್ಯೋಗಿಗಳು ಬಾಗಲಕೋಟೆಗೆ ತೆರಳುತ್ತಿದ್ದಾರೆ. ಆದರೆ ಸ್ಥಳೀಯ ಬಸ್ ಘಟಕವು ಸಮರ್ಪಕ ಬಸ್‌ಗಳನ್ನು ಓಡಿಸದೇ ಹಳೇಯ ಬಸ್‌ಗಳನ್ನೇ ಓಡಿಸುತ್ತಿದ್ದಾರೆ. ಇದೇ ಬಸ್ ನಿನ್ನೆಯೂ ಬ್ರೆಕ್ ೇಲಾಗಿ ಕೆಟ್ಟು ನಿಂತಿತ್ತು. ಆದರೂ ಸಂಬಂಧಿಸಿದವರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಯಾಣಿಕರು ದೂರಿದರಲ್ಲದೆ, ಮಾರ್ಗದಲ್ಲಿ ಬರುವ ಬಸ್‌ಗಳನ್ನು ತಡೆದು ಪ್ರತಿಭಟನೆ ನಡೆಸಿ ಘಟಕ ವ್ಯವಸ್ಥಾಪಕರು ಸ್ಥಳಕ್ಕೆ ಆಗಮಿಸುವವರೆಗೂ ಪ್ರತಿಭಟನೆ ಹಿಂಪಡೆಯಲ್ಲ ಎಂದು ಪಟ್ಟುಹಿಡಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ವ್ಯವಸ್ಥಾಪಕಿ ವಿದ್ಯಾ ನಾಯಕ ಅವರನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡರು.
ನಂತರ ಮಾತನಾಡಿದ ಬಸ್ ವ್ಯವಸ್ಥಾಪಕಿ ವಿದ್ಯಾ ನಾಯಕ, ಇನ್ನು ಮುಂದೆ ಡಿಪೊದಿಂದ ಬಸ್ ಹೊರಗೆ ಬಿಡುವಾಗ ಪರಿಶೀಲಿಸಿ ಓಡಿಸಲಾಗುವುದು. ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ನೋಡಿಕೊಳ್ಳುತ್ತೇವೆ ಎಂದು ಲಿಖತವಾಗಿ ಪ್ರಯಾಣಿಕರಿಗೆ ಬರೆದುಕೊಟ್ಟರು.
ಬಾಗಲಕೋಟೆಯ ಸಾರಿಗೆ ಘಟಕದ ಮೆಕ್ಯಾನಿಕಲ್ ವಿಭಾಗೀಯ ಮ್ಯಾನೇಜರ್‌ರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಪ್ರಯಾಣಿಕರು, ಬಸ್ ಡಿಪೋ ಅಧಿಕಾರಿಗಳು ಪ್ರಯಾಣಿಕರೊಂದಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಕೂಡಲೇ ಅವರನ್ನು ವರ್ಗ ಮಾಡಬೇಕೆಂದು ಒತ್ತಾಯಿಸಿದರು.
ಅಲ್ಲದೆ, ಗುಳೇದಗುಡ್ಡ ಬಸ್ ಡಿಪೋದಲ್ಲಿ ಹಳೇ ಬಸ್‌ಗಳಿದ್ದು, ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಕೂಡಲೇ ಹೊಸ ಬಸ್‌ಗಳನ್ನು ನೀಡಬೇಕೆಂದು ಶಾಸಕ ಭೀಮಸೇನ್ ಚಿಮ್ಮನಕಟ್ಟಿ ಅವರಿಗೆ ಪ್ರಯಾಣಿಕರು, ಸಾರ್ವಜನಿಕರು ಆಗ್ರಹಿಸಿದ್ದಾರೆ.