

ಹನೂರು: ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಏ.24 ರಂದು ನಡೆಯಲಿರುವ ಸಚಿವ ಸಂಪುಟ ಸಭೆಗೆ ಸಿದ್ಧತಾ ಕಾರ್ಯ ಭರದಿಂದ ಸಾಗುತ್ತಿರುವುದು ಒಂದೆಡೆಯಾದರೆ, ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ನೆರವೇರಿಸಲು ಶ್ರೀ ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮತ್ತೊಂದೆಡೆ ಸಿದ್ಧತೆಯಲ್ಲಿ ತೊಡಗಿಕೊಂಡಿದೆ.
ಮ.ಬೆಟ್ಟದ ಮಾಸ್ಟರ್ ಪ್ಲಾೃನ್ ಆವರಣದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡು ಉದ್ಘಾಟನೆಗೆ ಸಿದ್ಧವಾಗಿವೆ. ಹಾಗೆಯೇ ಭಕ್ತರ ಅನುಕೂಲಕ್ಕಾಗಿ ಹಲವು ಕಾಮಗಾರಿಗಳಿಗೆ ಶಂಕುಸ್ಥಾಪನೆಯನ್ನೂ ನೆರವೇರಿಸಲಾಗುತ್ತದೆ. ಈ ಸಂಬಂಧ ಸಚಿವರಾದ ಕೆ. ವೆಂಕಟೇಶ್, ಶಾಸಕ ಎಂ.ಆರ್ ಮಂಜುನಾಥ್ ಹಾಗೂ ಜಿಲ್ಲಾಧಿಕಾರಿ ಸಿ.ಟಿ ಶಿಲ್ಪಾನಾಗ್ ಆಗಾಗ್ಗೆ ಮ.ಬೆಟ್ಟಕ್ಕೆ ಭೇಟಿ ನೀಡಿ ಪರಿಶೀಲಿಸಿ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಇದೀಗ ಈ ಕಾರ್ಯಕ್ಕೆ ಕಾಲ ಕೂಡಿ ಬಂದಿದ್ದು, ಏ.24 ರಂದು ಭಕ್ತರ ಸೇವೆಗೆ ಸಮರ್ಪಣೆಯಾಗಲಿದೆ.
ಏನೇನು ಉದ್ಘಾಟನೆ?: ಪ್ರಾಧಿಕಾರ ವತಿಯಿಂದ ನಿರ್ಮಿಸಿರುವ ಮ.ಬೆಟ್ಟದ ದೀಪದಗಿರಿ ಒಡ್ಡುವಿನ ಶ್ರೀ ಮಹದೇಶ್ವರಸ್ವಾಮಿ ಪ್ರತಿಮೆಯ ತಳ ಭಾಗದಲ್ಲಿ ಮಾದಪ್ಪನ ಜೀವನ ಚರಿತ್ರೆ ಬಿಂಬಿಸುವ ಕಲಾ ಕೃತಿಗಳ ಸಂಗ್ರಹಾಲಯ, 45 ಕೋಟಿ ರೂ. ವೆಚ್ಚದಲ್ಲಿನ 376 ವಸತಿಗೃಹ ಒಳಗೊಂಡ ವಜ್ರಮಲೆ ಭವನ, 27.10 ಕೋಟಿ ರೂ. ವೆಚ್ಚದಲ್ಲಿನ ಸಮಗ್ರ ಒಳಚರಂಡಿ ಯೋಜನೆ, 8.51 ಕೋಟಿ ರೂ. ವೆಚ್ಚದಲ್ಲಿ ಹೆಲಿಪ್ಯಾಡ್ ಬಳಿ ಒಂದು ಮೆಗಾ ಸೋಲಾರ್ ಪವರ್ ಪ್ಲಾಂಟ್, 4.80 ಕೋಟಿ ರೂ. ವೆಚ್ಚದಲ್ಲಿ ದೊಡ್ಡಕೆರೆ ತೆಪ್ಪೋತ್ಸವದ ಕಲ್ಯಾಣಿ, ಮಹದೇಶ್ವರ ಸ್ವಾಮಿ ಪ್ರತಿಮೆಯ ತೆರಳುವ ಮಾರ್ಗದಲ್ಲಿನ 2.35 ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆ, ಚರಂಡಿ ಹಾಗೂ 46 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸಾಲೂರು ಬೃಹನ್ಮಠದ ವೇದಾಗಮ ಪಾಠಶಾಲೆಯ ಗುರುಕುಲ ಕಟ್ಟಡ ಉದ್ಘಾಟನೆಯಾಗಲಿದೆ.
ಯಾವ್ಯಾವುದಕ್ಕೆ ಶಂಕುಸ್ಥಾಪನೆ?: ಮ.ಬೆಟ್ಟ ಪ್ರವೇಶ ದ್ವಾರದ ಚೆಕ್‌ಪೋಸ್ಟ್, ಸುಸಜ್ಜಿತ ದಾಸೋಹ ಭವನ ಕಟ್ಟಡ, ರಾಜಗೋಪುರ ಎದುರು ಭಕ್ತರ ತಂಗುದಾಣ, ಆಲಂಬಾಡಿ ಗ್ರಾಮದಲ್ಲಿನ ಶ್ರೀರಂಗನಾಥಸ್ವಾಮಿ ದೇಗುಲ ಜೀರ್ಣೋದ್ಧಾರ, 3 ಮತ್ತು 4ನೇ ಹಂತದಲ್ಲಿನ ಡಾರ್ಮಿಟರಿ ಕಟ್ಟಡ ನಿರ್ಮಾಣ, ವಿವಿಧ 6 ಕೂಡು ರಸ್ತೆಗಳ ಅಭಿವೃದ್ಧಿ, ಮಹದೇಶ್ವರ ಸ್ವಾಮಿ ಪ್ರತಿಮೆ ಆವರಣದ ಸುತ್ತ ಗೇಬಿಯನ್ ವಾಲ್, ಜೆಎಸ್‌ಎಸ್ ವಸತಿ ಗೃಹದ ಪ್ರವೇಶ ದ್ವಾರದಿಂದ ಪಿಡಬ್ಲ್ಯುಡಿ ಇಲಾಖಾ ಕಚೇರಿವರೆಗೆ ಸಿಸಿ ರಸ್ತೆ, ಚರಂಡಿ, ಅಂಚೆ ಕಚೇರಿಯಿಂದ ಅಂತರಗಂಗೆ ಮಾರ್ಗದ ರಸ್ತೆ ಅಭಿವೃದ್ಧಿ, ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಿಂದ ಸಾಲೂರು ಬೃಹನ್ಮಠದವರೆಗೆ ಮರು ಡಾಂಬರೀಕರಣ, ದಾಸೋಹ ಭವನದ ಎದುರು, ಬಸ್ ನಿಲ್ದಾಣದಲ್ಲಿ ಪಾವತಿಸಿ ಉಪಯೋಗಿಸುವ ಶೌಚಗೃಹ, ಸ್ನಾನಗೃಹ ಹಾಗೂ ಪೌರಕಾರ್ಮಿಕರಿಗೆ ವಸತಿ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಲಿದೆ.
ಆಗಮಿಸಲಿರುವ ಗಣ್ಯರು: ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮ ಸುತ್ತೂರು ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ನೆರವೇರಲಿದೆ. ಸಾಲೂರು ಬೃಹನ್ಮಠದ ಹಿರಿಯ ಶ್ರೀ ಗುರುಸ್ವಾಮೀಜಿ, ಪೀಠಾಧಿಪತಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್, ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಉಪಸ್ಥಿತರಿರಲಿದ್ದು, ಅಧ್ಯಕ್ಷತೆಯನ್ನು ಶಾಸಕ ಎಂ.ಆರ್ ಮಂಜುನಾಥ್ ವಹಿಸಲಿದ್ದಾರೆ. ವಿವಿಧ ಇಲಾಖೆ ಸಚಿವರು, ಶಾಸಕರು ಹಾಗೂ ಇತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಇಂದಿರಾ ಕ್ಯಾಂಟೀನ್ ಉದ್ಘಾಟನೆ: ಹನೂರು ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ಅನ್ನು ಏ.25 ರಂದು ಸಿ.ಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಕೊನೆಯ ಹಂತದ ಕೆಲ ಕಾಮಗಾರಿ ಭರದಿಂದ ಸಾಗುತ್ತಿದೆ. ಪ್ರಜಾಸೌಧ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಲಿದೆ. ಈ ಬಗ್ಗೆ ಶಾಸಕ ಎಂ.ಆರ್. ಮಂಜುನಾಥ್ ಮುತುರ್ವಜಿ ವಹಿಸಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ನಿಟ್ಟುಸಿರುಬಿಟ್ಟ ಅಧಿಕಾರಿ ವರ್ಗ: ಸಂಪುಟ ಸಭೆ ಹಿನ್ನೆಲೆಯಲ್ಲಿ ಬೆಟ್ಟಕ್ಕೆ ಸರ್ಕಾರವೇ ಆಗಮಿಸುತ್ತಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಕೆಲವು ಕಾಮಗಾರಿಗಳಿಗೆ ಗಣ್ಯರಿಂದ ಶಂಕುಸ್ಥಾಪನೆ ನೆರವೇರಿಸುವುದು ಜಿಲ್ಲಾಡಳಿತ ಹಾಗೂ ಪ್ರಾಧಿಕಾರದ ಮಹಾದಾಸೆಯಾಗಿತ್ತು. ಆದರೆ 15 ದಿನದ ಹಿಂದೆ ಚುನಾವಣೆ ಆಯೋಗ ಗ್ರಾಮ ಪಂಚಾಯಿತಿಗಳಲ್ಲಿ ತೆರೆವಾಗಿದ್ದ ಸ್ಥಾನಕ್ಕೆ ಉಪ ಚುನಾವಣೆ ನಡೆಸುವಂತೆ ಅಧಿಸೂಚನೆ ಹೊರಡಿಸಿದ್ದು, ಇದರಲ್ಲಿ ಮ.ಬೆಟ್ಟದ ಗೊರಸಾಣೆ ಕ್ಷೇತ್ರದ ಒಂದು ಸ್ಥಾನಕ್ಕೆ ಚುನಾವಣೆ ನಡೆಯಬೇಕಿದೆ.
ಏ.22 ರಿಂದ ನೀತಿ ಸಂಹಿತಿ ಜಾರಿಯಲ್ಲಿರುತ್ತಿತ್ತು. ಏ.24 ರಂದು ನಿರ್ಧರಿಸಲಾಗಿದ್ದ ಉದ್ಘಾಟನೆ ಹಾಗೂ ಶಂಕುಸ್ಥಾಪನೆಗೆ ತೊಡಕಾಗುತ್ತಿತ್ತು. ಇದರಿಂದ ಅಧಿಕಾರಿ ವರ್ಗದಲ್ಲಿ ಗೊಂದಲದ ಮನೆ ಮಾಡಿತ್ತು. ಜಿಲ್ಲಾಧಿಕಾರಿ ಸಿ.ಟಿ ಶಿಲ್ಪಾನಾಗ್ ಅವರು ಚುನಾವಣೆ ಆಯುಕ್ತರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಜತೆಗೆ ಗ್ರಾಪಂ ಉಪ ಚುನಾವಣೆಯನ್ನು ಮುಂದೂಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಚುನಾವಣೆ ಆಯೋಗದ ಅಧೀನ ಕಾರ್ಯದರ್ಶಿ ಪ್ರಕಾಶ್ ಮರಬಳ್ಳಿ ಅವರು 15 ದಿನಗಳ ಮಟ್ಟಿಗೆ ಉಪ ಚುನಾವಣೆಯನ್ನು ಮುಂದೂಡಿ ಆದೇಶ ಹೊರಡಿಸಿದ್ದಾರೆ. ಇದರಿಂದ ಅಧಿಕಾರಿ ವರ್ಗ ನಿಟ್ಟುಸಿರು ಬಿಡುಂತಾಗಿದೆ.
ಮ.ಬೆಟ್ಟದಲ್ಲಿ ಸಚಿವ ಸಂಪುಟ ನಡೆಯುತ್ತಿರುವುದು ಐತಿಹಾಸಿಕ ಸಂಗತಿ. ಇದರಿಂದ ಜಿಲ್ಲೆಯ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಹಲವು ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವರು ಉದ್ಘಾಟಿಸುತ್ತಿರುವುದು ಅಭಿವೃದ್ಧಿಗೆ ಪೂರಕವಾಗಿದೆ. ಹನೂರಿನಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಹಾಗೂ ಪ್ರಜಾಸೌಧಕ್ಕೆ ಶಂಕುಸ್ಥಾಪನೆಯನ್ನು ಸಿಎಂ ನೆರವೇರಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಹಲವು ಅಭಿವೃದ್ಧಿ ಕೆಲಸಗಳು ಕಾರ್ಯರೂಪಕ್ಕೆ ಬರಲಿವೆ.
ಎಂ.ಆರ್.ಮಂಜುನಾಥ್, ಶಾಸಕ
ಸಚಿವ ಸಂಪುಟ ನಡೆಯುವ ದಿನವೇ ಪ್ರಾಧಿಕಾರದ ವತಿಯಿಂದ ನಿರ್ಮಿಸಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಕೆಲವು ಕಾಮಗಾರಿಗಳಿಗೆ ಸಿಎಂ ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕ್ಯಾಬಿನೆಟ್ ಸಚಿವರು ಹಾಗೂ ಶಾಸಕರಿಂದ ಶಂಕುಸ್ಥಾಪನೆ ನೆರವೇರಲಿದೆ. ಈ ಸಂಬಂಧ ಈಗಾಗಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಎ.ಈ.ರಘು ಕಾರ್ಯದರ್ಶಿ, ಶ್ರೀಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮ.ಬೆಟ್ಟ.