

ಹನೂರು: ತಾಲೂಕಿನ ಮಲೆಮಹದೇಶ್ವರಬೆಟ್ಟ ತಾಳುಬೆಟ್ಟ ಮಾರ್ಗದ 3ನೇ ತಿರುವಿನಲ್ಲಿ ಮಂಗಳವಾರ ಕಾಡಾನೆಯೊಂದು ಕಾಣಿಸಿಕೊಂಡಿದ್ದರೆ, ಮತ್ತೊಂದೆಡೆ ಪಾಲಾರ್ ಮಾರ್ಗದಲ್ಲಿರುವ ಕಾವೇರಿ ಕುಡಿಯುವ ನೀರು ಸರಬರಾಜು ಪಂಪ್‌ಹೌಸ್ ಬಳಿ ಒಂಟಿಸಲಗ ಆಗಮಿಸಿ ಸಾರ್ವಜನಿಕರಲ್ಲಿ ಆತಂಕ ಉಂಟು ಮಾಡಿತು.
ಮಲೆಮಹದೇಶ್ವರ ವನ್ಯಜೀವಿ ವಿಭಾಗಕ್ಕೆ ಸೇರಿದ ತಾಳುಬೆಟ್ಟದ ಮಾರ್ಗದ 3ನೇ ತಿರುವಿನ ಮೇಲ್ಭಾಗದಲ್ಲಿ ಬೆಳಗ್ಗೆ ಕಾಡಾನೆಯೊಂದು ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಕೆಲ ಭಕ್ತರು ಆತಂಕಗೊಂಡು ಚಲಿಸಿದರೆ, ಕೆಲವರು ಆನೆಯ ಚಲನವಲನದ ದೃಶ್ಯವನ್ನು ಕುತೂಹಲದಿಂದ ಸೆರೆ ಹಿಡಿಯಲು ಮುಂದಾದರು. ಈ ವೇಳೆ ಆನೆ ವಕ್ರದೃಷ್ಟಿಯನ್ನು ಬೀರುತ್ತಾ ತುಸು ದೂರು ಚಲಿಸಿ ನಿಂತಿತು. ರಸ್ತೆಗೆ ಇಳಿಯಲು ಪ್ರಯತ್ನಿಸಿದರೂ ಸಾಧ್ಯವಾಗದ ಆನೆ ಕೆಲಕಾಲ ನಿಂತಲ್ಲೇ ನಿಂತು ಕಾಡಿನತ್ತ ತೆರಳಿತು. ಬಳಿಕ ಭಕ್ತರು ನಿಟ್ಟುಸಿರು ಬಿಟ್ಟು ಮುಂದೆ ಸಾಗಿದರು. ಈ ದೃಶ್ಯ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ಪಂಪ್‌ಹೌಸ್ ಬಳಿ ಆಗಮಿಸಿದ್ದ ಒಂಟಿಸಲಗ: ಹಾಗೆಯೇ ಮಹದ್ವೇರ ಬೆಟ್ಟದಿಂದ ಪಾಲಾರ್‌ಗೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯೆಯ ಬೆಟ್ಟಕ್ಕೆ ಕಾವೇರಿ ಕುಡಿಯುವ ನೀರು ಸರಬರಾಜು ಮಾಡುವ ಪಂಪ್‌ಹೌಸ್ ಬಳಿ ಮಧ್ಯಾಹ್ನ ಒಂಟಿಸಲಗ ಆಗಮಿಸಿದ್ದು, ಕಾಂಪೌಂಡ್ ದಾಟಲಾಗದೇ ನಿಂತಲ್ಲೇ ನಿಂತಿತು. ಇದರ ದೃಶ್ಯವನ್ನು ಸಹ ಸಾರ್ವಜನಿಕರು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲ ತಾಣದಲ್ಲಿ ಹರಿ ಬಿಟ್ಟಿದ್ದು, ಆತಂಕ ವ್ಯಕ್ತಪಡಿಸಿದ್ದಾರೆ.
ಕಡಿವಾಣಕ್ಕೆ ಒತ್ತಾಯ: ಮಹದೇಶ್ವರ ಬೆಟ್ಟಕ್ಕೆ ರಾಜ್ಯದ ವಿವಿಧೆಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ತೆರಳುತ್ತಾರೆ. ಆದರೆ ಕಳೆದ ನಾಲ್ಕೈದು ತಿಂಗಳಿನಿಂದಲೂ ಹನೂರಿನಿಂದ ಮಹದೇಶ್ವರ ಬೆಟ್ಟದ ಮಾರ್ಗದ ರಸ್ತೆಯಲ್ಲಿ ಆಗಾಗ್ಗೆ ಕಾಡಾನೆಗಳು ಕಾಣಿಸಿಕೊಳ್ಳುತ್ತಲೇ ಇವೆ. ಇದು ಭಕ್ತರ ಆತಂಕಕ್ಕೆ ಕಾರಣವಾಗಿದೆ. ಆದ್ದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಇನ್ನಾದರೂ ಇತ್ತ ಗಮನಹರಿಸಿ ಪ್ರಾಣಾಪಾಯ ಸಂಭವಿಸುವ ಮುನ್ನಾ ಎಚ್ಚೆತ್ತು ಕಾಡಾನೆಗಳು ರಸ್ತೆ ಬದಿಗೆ ಬಾರದಂತೆ ಕ್ರಮ ವಹಿಸುವಂತೆ ಭಕ್ತರು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.