

ಮೂಡಿಗೆರೆ: ಭುವನೇಶ್ವರಿ ಗುಂಪಿನ 25 ಕಾಡಾನೆಗಳ ಹಿಂಡು ನಂದಿಪುರ, ಮಾಕೋನಹಳ್ಳಿ, ಹಳಸೆ, ಕುನ್ನಳ್ಳಿ, ಹಳೆಮೂಡಿಗೆರೆ, ಘಟ್ಟದಹಳ್ಳಿ, ಬೀಜುವಳ್ಳಿ, ಬಿಳಗುಳ, ಕೊಲ್ಲಿಬೈಲ್ ಮತ್ತಿತರೆ ಗ್ರಾಮಗಳಲ್ಲಿ ಸಂಚರಿಸಿ ರೈತರ ಬೆಳೆಯನ್ನು ನಾಶಮಾಡಿವೆ. ಇನ್ನೊಂದು ಗುಂಪಿನ ಕಾಡಾನೆ ಗೋಣಿಬೀಡು ಜಿ.ಹೊಸಹಳ್ಳಿ, ಟಾಟಾ ಕಾಫಿ ಎಸ್ಟೇಟ್, ಪೊಡಿಯ ಕಾಲೋನಿ, ದಿಣ್ಣೆಕೆರೆ, ಕೆಮ್ಮಣಗುಂಡಿ ಇನ್ನಿತರೆ ಕಡೆ ತಿರುಗಾಡುತ್ತಾ ಉಪಟಳ ನೀಡುತ್ತಿದೆ. ಮಾತ್ರವಲ್ಲದೆ ಒಂಟಿ ಕಾಡಾನೆ ತಿರುಗಾಡುತ್ತಾ ಸಾರ್ವಜನಿಕರ ನಿದ್ದೆಗೆಡಿಸಿದೆ.
ಗೋಣಿಬೀಡು ಸಮೀಪದ ಕಮ್ಮರಗೋಡು ಗ್ರಾಮಕ್ಕೆ ಲಗ್ಗೆಯಿಟ್ಟಿರುವ ಒಂಟಿ ಕಾಡಾನೆ, ರೈತರೊಬ್ಬರ ಕೃಷಿ ಹೊಂಡಕ್ಕೆ ಇಳಿದು ನೀರಿನಲ್ಲಿ ಆಟವಾಡಿರುವುದು ಈ ಭಾಗದ ಜನರಲ್ಲಿ ಆತಂಕ ಸೃಷ್ಟಿಸಿದೆ. ಕಳೆದ ಒಂದುವರೆ ತಿಂಗಳಿನಿಂದ ಗೋಣಿಬೀಡು ಭಾಗದಲ್ಲಿ ಬೀಡು ಬಿಟ್ಟಿರುವ ಒಂಟಿ ಕಾಡಾನೆ, ಕೆಲ ದಿನದ ಹಿಂದೆ ಮನೆ ಮುಂದಿನ ಬಾಗಿಲ ಮೂಲಕ ಒಳ ಪ್ರವೇಶಿಸಲು ವಿಫಲ ಯತ್ನ ನಡೆಸಿತ್ತು. ಇದರಿಂದ ಮನೆಯವರು ಭಯ ಭೀತರಾಗಿದ್ದರು. ಅದೇ ಒಂಟಿ ಕಾಡಾನೆ ಭಾನುವಾರ ಕೃಷಿ ಹೊಂಡಕ್ಕಿಳಿದಿರುವ ಸುದ್ದಿ ಹರಡುತ್ತಿದ್ದಂತೆ ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿ ವಿಡಿಯೋ, ಫೋಟೋ ಸೆರೆಹಿಡಿದರು. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು, ಕಾಡಾನೆಯನ್ನು ಕೃಷಿಹೊಂಡದಿಂದ ಪಕ್ಕದಲ್ಲಿರುವ ಅರಣ್ಯ ಪ್ರದೇಶಕ್ಕೆ ಓಡಿಸಿದ್ದಾರೆ.
ರಾತ್ರಿಯಾಗುತ್ತಿದ್ದಂತೆ ಮನೆಯಂಗಳಕ್ಕೆ ಬರುವ ಒಂಟಿ ಕಾಡಾನೆ, ಇನ್ನಿಲ್ಲದಂತೆ ಉಪಟಳ ನೀಡುತ್ತಾ ಕಾಫಿ, ಬಾಳೆ ಇತರೆ ಗಿಡಗಳನ್ನು ನಾಶ ಮಾಡುತ್ತಿದೆ. ಇನ್ನೊಂದು ಒಂಟಿ ಕಾಡಾನೆಯನ್ನು ಕಳೆದವಾರ ಅರಣ್ಯ ಇಲಾಖೆ ಅಧಿಕಾರಿಗಳು ಆಲ್ದೂರು ಸಮೀಪ ಸೆರೆಹಿಡಿದು ಸಾಗಿಸಿದ್ದಾರೆ. ಉಳಿದಿರುವ ಒಂಟಿ ಸಲಗನನ್ನು ಹಿಡಿದು ಸಾಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.