ನಿವೇಶನ ರಹಿತರಿಗೆ ಹಕ್ಕುಪತ್ರ ವಿತರಿಸಲು ಏಕಾಂಗಿ ಹೋರಾಟ

MDG ni pro-1
ಮೂಡಿಗೆರೆ ತಾಲೂಕು ಕಚೇರಿ ಎದುರು ನಿಡುವಾಳೆ ಗ್ರಾಪಂ ಉಪಾಧ್ಯಕ್ಷ ನವೀನ್ ಹಾವಳಿ ಏಕಾಂಗಿಯಾಗಿ ಧರಣಿ ನಡೆಸಿದರು.
Published on

ಮೂಡಿಗೆರೆ: ನಿವೇಶನ ರಹಿತರಿಗೆ ಹಕ್ಕುಪತ್ರ ನೀಡಲು ತಹಸೀಲ್ದಾರ್ ಸತಾಯಿಸುತ್ತಿದ್ದಾರೆ. ಅಧಿಕಾರಿಗಳ ವರ್ತನೆ ಸರಿಯಲ್ಲ ಎಂದು ಆರೋಪಿಸಿ ನಿಡುವಾಳೆ ಗ್ರಾಪಂ ಉಪಾಧ್ಯಕ್ಷ ನವೀನ್ ಹಾವಳಿ ಮಂಗಳವಾರ ತಾಲೂಕು ಕಚೇರಿ ಎದುರು ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು.

ಎರಡು ವರ್ಷದಿಂದ ನಿಡುವಾಳೆ ಗ್ರಾಪಂ ಮರ್ಕಲ್ ಹಾಗೂ ನಿಡುವಾಳೆ ಗ್ರಾಮದ 70ಕ್ಕೂ ಹೆಚ್ಚು ನಿವೇಶನ ರಹಿತ ಕುಟುಂಬದವರು 94 ಸಿಯಲ್ಲಿ ಅರ್ಜಿ ಸಲ್ಲಿಸಿ ಕಚೇರಿಗಳಿಗೆ ಅಲೆದಾಡಿ ಹೈರಾಣಾಗಿದ್ದಾರೆ. ಅರ್ಜಿ ಸಲ್ಲಿಸಿದ ನಿವೇಶನ ರಹಿತರ ಪೈಕಿ 30 ಮಂದಿ ನಿವೇಶನಕ್ಕಾಗಿ ಸರ್ಕಾರಕ್ಕೆ ಹಣ ಪಾವತಿಸಿದ್ದಾರೆ. ಆದರೂ ತಹಸೀಲ್ದಾರ್ ಹಕ್ಕುಪತ್ರ ನೀಡುತ್ತಿಲ್ಲ. ತಹಸೀಲ್ದಾರ್ ಅವರನ್ನು ವಿಚಾರಿಸಿದರೆ ಸಬೂಬು ಹೇಳಿ ನುಣುಚಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ನಿಡುವಾಳೆ ಗ್ರಾಪಂ ವ್ಯಾಪ್ತಿಯಲ್ಲಿ ಕೂಲಿ ಕಾರ್ಮಿಕ ಕುಟುಂಬದವರು ಹೆಚ್ಚಾಗಿದ್ದಾರೆ. ಹಲವಾರು ವರ್ಷದಿಂದ ಕಾಫಿ ತೋಟದ ಕೂಲಿ ಲೈನಿನಲ್ಲಿ ವಾಸವಾಗಿದ್ದಾರೆ. ಈವರೆಗೂ ನಿವೇಶನ ಒದಗಿಸಲು ಸಾಧ್ಯವಾಗಿಲ್ಲ. 94 ಸಿಯಲ್ಲಿ ಅರ್ಜಿ ಸಲ್ಲಿಸಿ ಎರಡು ವರ್ಷ ಕಳೆದಿದೆ. ಕೂಲಿ ಕಾರ್ಮಿಕರ ಅರ್ಜಿ ವಿಲೇವಾರಿಗೆ ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದರಿಂದ ಇದುವರೆಗೂ ನಿವೇಶನ ನೀಡಲು ಸಾಧ್ಯವಾಗಿಲ್ಲ. ಕೂಲಿಕಾರ್ಮಿಕರ ಕುಟುಂಬಗಳಿಗೆ ಶೀಘ್ರ ನಿವೇಶನ ಒದಗಿಸಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net