ಪಾಲರ್ ರಸ್ತೆಯಲ್ಲಿ ಒಂಟಿ ಸಲಗ ಪ್ರತ್ಯಕ್ಷ

26 HANUR 6
Published on

 ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟ ಸಮೀಪದ ಪಾಲಾರ್ ರಸ್ತೆಯಲ್ಲಿ ಶನಿವಾರ ಒಂಟಿಸಲಗವೊಂದು ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಕೆಲಕಾಲ ಆತಂಕ ಉಂಟು ಮಾಡಿತ್ತು.

ಈ ಮಾರ್ಗವು ತಮಿಳುನಾಡಿನ ಪಾಲಾರ್‌ಗೆ ಸಂಪರ್ಕ ಕಲ್ಪಿಸುವ ಅಂತರಾಜ್ಯ ಹೆದ್ದಾರಿಯಾಗಿದ್ದು, ಅರಣ್ಯ ಪ್ರದೇಶದ ಮೂಲಕ ಹಾದು ಹೋಗಿದೆ. ಈ ಮಾರ್ಗದಲ್ಲಿ ಒಂಟಿ ಸಲಗವೊಂದಿದ್ದು, ಈ ಹಿಂದೆ ರಸ್ತೆಗೆ ಅಡ್ಡಲಾಗಿ ಬಂದು ನಿಲ್ಲುತ್ತಿತ್ತು. ಇದರಿಂದ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಆತಂಕಕ್ಕೆ ಒಳಗಾಗುತ್ತಿದ್ದರು. ಆದರೆ, ಇತ್ತೀಚಿಗೆ ಕಾಣಿಸಿಕೊಳ್ಳುತ್ತಿರಲಿಲ್ಲ. ಶನಿವಾರ ಮಧ್ಯಾಹ್ನ ಈ ರಸ್ತೆಯಲ್ಲಿ ಕಾಣಿಸಿಕೊಂಡ ಒಂಟಿಸಲಗ ರಸ್ತೆ ಬದಿಯಲ್ಲಿನ ಗುಡ್ಡದ ಮಣ್ಣನ್ನು ದಂತದಿಂದ ತಿವಿಯುತ್ತಿತ್ತು. ಇದನ್ನು ತಿಳಿದ ವಾಹನ ಸವಾರರು ವೀಕ್ಷಿಸುತ್ತಾ ನಿಂತಲ್ಲೇ ನಿಂತರು. ಕೆಲವರು ಈ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಿದ್ದರೆ, ಇನ್ನು ಕೆಲವರು ಭಯಗೊಂಡು ಹಿಂದೆ ಸರಿದರು. ಈ ವೇಳೆ ಆನೆ ಜನರನ್ನು ನೋಡಿ ವಕ್ರದೃಷ್ಟಿ ಬೀರುತ್ತಾ ಘೀಳಿಡುತ್ತಿತ್ತು. ಕೆಲ ಹೊತ್ತಿನ ಬಳಿಕ ಒಂಟಿ ಸಲಗ ಕಾಡಿನತ್ತ ತೆರಳಿತು. ಇದರ ದೃಶ್ಯವನ್ನು ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದು, ಒಂಟಿಸಲಗ ರಸ್ತೆಗೆ ಬಾರದ ರೀತಿಯಲ್ಲಿ ಕಡಿವಾಣ ಹಾಕುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net