

ಮೂಡಿಗೆರೆ: ಕಳೆದ 10 ದಿನಗಳಿಂದ ಚಾರ್ಮಾಡಿ ಘಾಟ್‌ನ ರಸ್ತೆಯಲ್ಲೆ ಒಂಟಿ ಕಾಡಾನೆ ಬೀಡುಬಿಟ್ಟಿದ್ದು, ವಾಹನ ಸವಾರರು ನಡುರಸ್ತೆಯಲ್ಲೇ ಗಂಟೆಗಟ್ಟಲೇ ಕಾದು ಸಲಗ ಕಾಡಿಗೆ ಸರಿಯುತ್ತಿದ್ದಂತೆ ಭಯದಲ್ಲೆ ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಳ್ತಂಗಡಿ ಅರಣ್ಯ ವ್ಯಾಪ್ತಿಯ 2ನೇ ತಿರುವಿನಲ್ಲಿ ಕಾಡಾನೆ ಬೀಡು ಬಿಟ್ಟಿತ್ತು. ಈಗ 2 ದಿನದಿಂದ ಅದೆ ವ್ಯಾಪ್ತಿಯ 5ನೇ ತಿರುವಿನಲ್ಲಿ ಬೀಡು ಬಿಟ್ಟಿದೆ. ಕಾಡಾನೆ ಒಮ್ಮೆ ರಸ್ತೆಗಿಳಿದರೆ ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆಯ ಮಧ್ಯಭಾಗದಲ್ಲಿ ನಿಂತಿರುತ್ತದೆ. ಆಗ ವಾಹನಗಳನ್ನು ದೂರದಲ್ಲಿ ನಿಲ್ಲಿಸಿ ಕಾಡಾನೆ ಬದಿಗೆ ಸರಿದೊಡನೆ ಪ್ರಾಣ ಭಯದಲ್ಲಿ ಸಾಗುತ್ತಾರೆ.
ರಾತ್ರಿ ವೇಳೆಯಲ್ಲಂತೂ ಕಾಡಾನೆ ವಾಹನಗಳ ಬೆಳಕು ಕಂಡೊಡನೆ ರಸ್ತೆಗೆ ಇಳಿದು ಬಿಡುತ್ತಿದೆ. ಕಾಡಾನೆ ಕಾಟದಿಂದ ಬೇಸತ್ತ ಅನೇಕರು ಚಾರ್ಮಾಡಿ ಘಾಟ್ ಬಿಟ್ಟು ಶಿರಾಡಿ ಘಾಟ್ ಮೂಲಕ ಮಂಗಳೂರು ಕಡೆಗೆ ಸಾಗುತ್ತಿದ್ದಾರೆ. ಕಾಡಾನೆ ರಸ್ತೆಯಲ್ಲಿರುವಾಗ ರಸ್ತೆಯ ಎರಡು ಕಡೆಯಲ್ಲೂ ಕಿ.ಮೀ.ಗಟ್ಟಲೆ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಕೆಲವು ವಾಹನಗಳ ಚಾಲಕರು ಗಾಬರಿಯಿಂದ ಘಾಟ್ ರಸ್ತೆಯಲ್ಲಿ ಸಾಗುವ ಉಸಾಬರಿಯೇ ಬೇಡ ಎಂದು ತಮ್ಮ ವಾಹನವನ್ನು ತಿರುಗಿಸಿಕೊಂಡು ಬಂದ ದಾರಿಯಲ್ಲಿಯೇ ವಾಪಸಾಗುತ್ತಾರೆ. ಆಗ ಇನ್ನಷ್ಟು ಟ್ರಾಫಿಕ್ ಜಾಮ್ ಉಂಟಾಗುತ್ತದೆ.
ಕಳೆದ ಭಾನುವಾರ ರಾತ್ರಿ 2ನೇ ತಿರುವಿನಲ್ಲಿ ಮೇಲ್ಭಾಗದಲ್ಲಿ ಕಾಡಾನೆ ರಸ್ತೆಯಲ್ಲಿ ನಿಂತಿತ್ತು. ಅದನ್ನು ನೋಡಿ ಗಾಬರಿಗೊಂಡ ಬೊಲೆರೋ ವಾಹನದ ಚಾಲಕ ಸಲಗ ನಿಂತಿದ್ದ ರಸ್ತೆಯ ಪಕ್ಕಕ್ಕೆ ಸರಿಸುವ ಧಾವಂತದಲ್ಲಿ ನಿಯಂತ್ರಣ ತಪ್ಪಿ ವಾಹನ ಚರಂಡಿಗೆ ಸರಿದಿತ್ತು. ಅದರಲ್ಲಿದ್ದ ಪ್ರಯಾಣಿಕರು ವಾಹನದಿಂದ ಇಳಿದು, ಓಡಿ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡಿದ್ದರು.
ನಿರಂತರವಾಗಿ ಒಂಟಿ ಕಾಡಾನೆ ರಸ್ತೆಯಲ್ಲಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ. ಸಲಗವನ್ನು ಕಾಡಿಗಟ್ಟಲು ಯಾವುದೇ ಕ್ರಮಕೈಗೊಂಡಿಲ್ಲ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಮತ್ತು ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದಲ್ಲಿ ಪೊಲೀಸ್ ಹಾಗೂ ಅರಣ್ಯ ಇಲಾಖೆಯ ವಾಹನ ತಪಸಣಾ ಕೇಂದ್ರಗಳಿದ್ದರೂ ಕಾಡಾನೆ ರಸ್ತೆಯಲ್ಲಿರುವ ಬಗ್ಗೆ ಚೆಕ್‌ಪೋಸ್ಟ್ ಸಿಬ್ಬಂದಿ ವಾಹನ ಚಾಲಕರಿಗೆ ಮಾಹಿತಿ ನೀಡುತ್ತಿಲ್ಲ. ಘಾಟ್ ರಸ್ತೆಯಲ್ಲಿ ಪೊಲೀಸರು ಅಥವಾ ಅರಣ್ಯ ಇಲಾಖೆಯ ಗಸ್ತು ವಾಹನಗಳು ತಿರುಗಾಡುತ್ತಿಲ್ಲ. ಘಾಟ್ ಪ್ರದೇಶದ 22 ಕಿ.ಮೀ. ವ್ಯಾಪ್ತಿಯ ರಸ್ತೆಯಲ್ಲಿ ಮೊಬೈಲ್ ನೆಟ್‌ವರ್ಕ್ ಕೂಡ ಇಲ್ಲದಿರುವುದರಿಂದ ವಾಹನದಲ್ಲಿ ಸಾಗುವ ಪ್ರಯಾಣಿಕರಿಗೆ ಭದ್ರತೆ ಇಲ್ಲ. ಒಂಟಿ ಸಲಗದಿಂದ ಪ್ರಯಾಣಿಕರ ಪ್ರಾಣಕ್ಕೆ ಕಂಟಕ ಎದುರಾಗುವ ಮುನ್ನ, ಅದನ್ನು ಹಿಡಿದು ಸಾಗಿಸಬೇಕು ಬೆಟ್ಟಗೆರೆ ಗ್ರಾಪಂ ಮಾಜಿ ಅಧ್ಯಕ್ಷ ಜಾಕೀರ್ ಹುಸೇನ್ ಒತ್ತಾಯಿಸಿದ್ದಾರೆ.