

ಕುಮಟಾ: ಕೊಂಕಣಿ ಭಾಷೆ ಅತ್ಯಂತ ಮೃದು ಹಾಗೂ ಮಧುರವಾದ ಭಾಷೆಯಾಗಿದೆ. ಕೊಂಕಣಿ ಭಾಷೆಯ ಮೂಲತನ, ಸೊಗಡು ಉಳಿವಿಗೆ ಸಾಹಿತ್ಯಿಕ ಪ್ರಯತ್ನಗಳು ಹಾಗೂ ಆಧುನಿಕ ಅಂತರ್ಜಾಲ ಮಾಧ್ಯಮದ ಬಳಕೆ ಹೆಚ್ಚಬೇಕಿದೆ. ಮಕ್ಕಳನ್ನು ಭಾಷಾ ಚಟುವಟಿಕೆಗೆ ಉತ್ತೇಜಿಸಬೇಕಿದೆ ಎಂದು ಮುಂಬೈನ ಟಾಟಾ ಪೊ›ಜೆಕ್ಸ್ಟ್ಲಿಮಿಟೆಡ್ನ ಎಂಡಿ, ಸಿಇಒ ವಿನಾಯಕ ರತ್ನಾಕರ ಪೈ ಹೇಳಿದರು.
ಪಟ್ಟಣದ ನಾದಶ್ರೀ ಕಲಾಕೇಂದ್ರದಲ್ಲಿ ಕೊಂಕಣಿ ಪರಿಷತ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಕೊಂಕಣಿ ಮಾನ್ಯತಾ ದಿವಸ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವೈವಿಧ್ಯಮಯ ಕೊಂಕಣಿ ಕಾರ್ಯಕ್ರಮಗಳ ಮೂಲಕ ಮಾತೃ ಭಾಷೆಯನ್ನು ಉಳಿಸಿ, ಬೆಳೆಸುವ ಕಾಳಜಿ ಕಾರ್ಯ ಕುಮಟಾದಲ್ಲಿ ಪದೇಪದೆ ನಡೆಯುತ್ತಿರುವುದು ಖುಷಿಯ ಸಂಗತಿ. ಅದರಲ್ಲೂ ಕೊಂಕಣಿ ಬರಹಗಾರರನ್ನು ಪ್ರೋತ್ಸಾಹಿಸಲು ಪರಿಷತ್ ಹಮ್ಮಿಕೊಂಡ ಕಾರ್ಯ ನಿಜಕ್ಕೂ ಶ್ಲಾಘನೀಯ. ಇಂಥ ಕಾರ್ಯಕ್ರಮ ಪೋ›ತ್ಸಾಹಿಸುವ ಕಾರ್ಯವನ್ನು ನಾವೆಲ್ಲ ಸೇರಿ ಮಾಡಬೇಕು ಎಂದರು.
ಮುಖ್ಯ ಅತಿಥಿ ಸೈಂಟ್ ಮಿಲಾಗ್ರಿಸ್ ಸೊಸೈಟಿ ಸಿಇಒ ಜಾರ್ಜ್ ಫರ್ನಾಂಡಿಸ್ ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ ಸರ್ಕಾರ ಅನುದಾನ ನೀಡುವಂತೆ ಕೊಂಕಣಿ ಮಾನ್ಯತಾ ದಿವಸ್ ಕಾರ್ಯಕ್ರಮಕ್ಕೂ ಅನುದಾನ ನೀಡುವಂತೆ ಸರ್ಕಾರವನ್ನು ಆಗ್ರಹಿಸುವ ಕಾರ್ಯವಾಗಬೇಕು ಎಂದರು.
ಲೇಖಕಿ ವನಿತಾ ಶಿರೀಷ್ ನಾಯಕ ಬರೆದ ‘ಸಂಸ್ಕಾರ ಕಾಣಿ’ ಪುಸ್ತಕ ಬಿಡುಗಡೆಗೊಳಿಸಲಾಯಿತು. ಪರಿಷತ್ ಉಪಾಧ್ಯಕ್ಷ ಮುರಳೀಧರ ಪ್ರಭು ಪುಸ್ತಕ ಪರಿಚಯಿಸಿದರು. ಭಜನಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಾಧಕ ವಿದ್ಯಾರ್ಥಿಗಳಾದ ಆಮೋದ ರಘುಪತಿ ಭಟ್, ಗಾಯತ್ರಿ ಬಾಲಚಂದ್ರ ಕಾಮತ, ವೈಭವಿ ವಿನೋದ ಪಂಡಿತ ಇತರರನ್ನು ಪುರಸ್ಕರಿಸಲಾಯಿತು. ಟಾಟಾ ಪೊ›ಜೆಕ್ಸ್ಟ್ ಸಿಇಒ ವಿನಾಯಕ ರತ್ನಾಕರ ಪೈ ಅವರನ್ನು ಸನ್ಮಾನಿಸಲಾಯಿತು. ಪರಿಷತ್ ತಾಲೂಕಾಧ್ಯಕ್ಷ ಅರುಣ ಎಸ್. ಉಭಯಕರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ನಿರ್ಮಲಾ ಪ್ರಭು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಎಂ.ಬಿ. ಪೈ ಗಣ್ಯರನ್ನು ಪರಿಚಯಿಸಿದರು. ಪರಿಷತ್ ಸಂಚಾಲಕ ಪೊ›. ಆನಂದು ವೈ. ನಾಯ್ಕ ನಿರ್ವಹಿಸಿದರು. ಬಳಿಕ ನಾದಶ್ರೀ ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ ಕೊಂಕಣಿ ನೃತ್ಯ ಪ್ರದರ್ಶನ, ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರೆದ ಪ್ರೇಕ್ಷಕರನ್ನು ರಂಜಿಸಿತು.