

ಹುಬ್ಬಳ್ಳಿ: ಕೈ-ಕಾಲು ಕಳೆದುಕೊಂಡಿದ್ದವರು ಜೀವನವೇ ಮುಗಿದು ಹೋಯಿತು ಎಂದುಕೊಂಡಿದ್ದರು. ನಮ್ಮ ಕುಟುಂಬಕ್ಕೆ, ನಮಗಿನ್ಯಾರು ದಿಕ್ಕು? ಎಂದು ಭಾವಿಸಿದ್ದರು. ಆದರೆ, ಹುಬ್ಬಳ್ಳಿಯ ಮಜೇಥಿಯಾ ಫೌಂಡೇಷನ್ ವತಿಯಿಂದ ನಗರದ ಮೂರುಸಾವಿರ ಮಠದ ಮೂಜಗಂ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಉಚಿತ ಕೃತಕ ಕೈ-ಕಾಲು ಜೋಡಣೆ ಶಿಬಿರದಲ್ಲಿ 128 ಅಂಗವಿಕಲರು ಕೃತಕ ಕೈ-ಕಾಲು ಅಳವಡಿಸಿಕೊಂಡು ಜೀವನೋತ್ಸಾಹ ಪಡೆದರು.
ಧಾರವಾಡ, ಬೆಳಗಾವಿ, ಬಾಗಲಕೋಟೆ, ಹಾವೇರಿ, ಗದಗ, ದಾವಣಗೆರೆ, ಅಂಕೋಲಾ, ಉಡುಪಿ, ಉತ್ತರ ಕನ್ನಡ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಅಂಗವಿಕಲರು ತಾವು ಮೊದಲು ಕೊಟ್ಟಿದ್ದ ಅಳತೆಯಂತೆಯೇ ಕೃತಕ ಕೈ-ಕಾಲು ಪಡೆದು ಹಸನ್ಮುಖಿಯಾದರು. ಇನ್ನು ಮುಂದೆ ನಾವು ಯಾರಿಗೂ ಭಾರವಾಗದಂತೆ ಬದುಕುವೆವು ಎಂಬ ಉತ್ಸಾಹವನ್ನು ಹೊರಹಾಕಿದರು.
ಮಜೇಥಿಯಾ ಫೌಂಡೇಷನ್ ಕಾರ್ಯ ಶ್ಲಾಘನೀಯ: ಅಂಗವಿಕಲರ ಬಾಳಿಗೆ ಬೆಳಕು ನೀಡುವಂಥ ಕೆಲಸವನ್ನು ಮಜೇಥಿಯಾ ಫೌಂಡೇಷನ್ ಮಾಡುತ್ತಿದೆ. ಸರ್ಕಾರದಂತೆಯೇ ಫೌಂಡೇಷನ್ ಸೇವೆ ಮುಂದುವರಿಯಲಿ ಎಂದು ಶಾಸಕ ಹಾಗೂ ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಸಲಹೆ ನೀಡಿದರು.
ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸತತ 17 ವರ್ಷದಿಂದ ಅಂಗವಿಕಲರಿಗೆ ಕಲ್ಯಾಣ ಮಾಡುವುದರ ಜತೆಗೆ ಸಮಾಜ ಸೇವೆಯಲ್ಲಿ ಜಿತೇಂದ್ರ ಮಜೇಥಿಯಾ ಅವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಬಲಹೀನರನ್ನು ಮುಖ್ಯವಾಹಿನಿಗೆ ತರುವ ಕೆಲಸವನ್ನು ಮಾಡುತ್ತಿದ್ದಾರೆ. ಆಲದ ಮರವಾಗಿ ಇತರರಿಗೆ ನೆರಳು ನೀಡುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಮಜೇಥಿಯಾ ಫೌಂಡೇಷನ್ ಚೇರ್ಮನ್ ಜಿತೇಂದ್ರ ಮಜೇಥಿಯಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜಮುಖಿ ಕೆಲಸ ಮಾಡುವ ಉದ್ದೇಶದಿಂದ ಫೌಂಡೇಷನ್ ಸ್ಥಾಪಿಸಲಾಗಿದೆ. ಬಡವರು, ದೀನ-ದಲಿತರಿಗೆ ಶಿಕ್ಷಣ, ಆರೋಗ್ಯ ಕೊಡುವ ಉದ್ದೇಶವನ್ನು ಹೊಂದಿದೆ. ಫೌಂಡೇಷನ್ ನೆರವು ಪಡೆಯಬಹುದು ಎಂದರು.
ಆರ್ಥೊಪೆಡಿಕ್ ಸರ್ಜನ್ ಡಾ. ಸಂದೀಪ ನೀರಲಗಿ ಅವರು, ಕೃತಕ ಕೈ-ಕಾಲು ಹಾಕಿಸಿಕೊಂಡವರು ಹೇಗೆ ನಡೆಯಬೇಕು? ಎಂಬುದರ ಬಗ್ಗೆ ಸಲಹೆಗಳನ್ನು ನೀಡಿದರು.
ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ, ಟ್ರಸ್ಟಿಗಳಾದ ಕಶ್ಯಪ ಮಜೇಥಿಯಾ, ಡಾ. ರಮೇಶ ಬಾಬು, ಡಾ.ವಿ.ಬಿ. ನಿಟಾಲಿ, ಎಚ್.ಆರ್. ಪ್ರಲ್ಹಾದರಾವ್, ಅಮರೇಶ ಹಿಪ್ಪರಗಿ, ಸಿಇಒ ಸುನಿಲಕುಮಾರ ಕುಕನೂರ, ಪ್ರಮುಖರಾದ ಶ್ರೀಧರ ಜೋಶಿ, ಡಾ. ಶಂಕರ ಕಮಟೆ, ಡಾ. ಕವಿತಾ ಮೊಹರೆ, ಡಾ. ಶ್ರೀಧರ ದಂಡಪ್ಪನವರ, ನವೀನ ಮಾಲಿನ್, ಶ್ವೇತಾ ಜೈನ್, ಬಾಲಚಂದ್ರ ಡಂಗನವರ, ರಜತ ಉಳ್ಳಾಗಡ್ಡಿಮಠ, ಸುಭಾಷಸಿಂಗ್ ಜಮಾದಾರ ಇತರರು ಇದ್ದರು.