ಶಿಸ್ತಿಲ್ಲದ ಜೀವನ ನಾವಿಕನಿಲ್ಲದ ಹಡಗಿನಂತೆ: ಕೌಶಲ ತರಬೇತುದಾರ ಆರ್.ಎ.ಚೇತನ್ ರಾಮ್

38
Published on

ಮೈಸೂರು: ಮೈಸೂರು: ಶಿಸ್ತಿಲ್ಲದ ಜೀವನ ನಾವಿಕನಿಲ್ಲದ ಹಡಗಿನಂತೆ ಎಂದು ವ್ಯಕ್ತಿತ್ವ, ಜೀವನ ಕೌಶಲ ತರಬೇತುದಾರ ಆರ್.ಎ.ಚೇತನ್ ರಾಮ್ ಹೇಳಿದರು.

ಬಸವಮಾರ್ಗ ಫೌಂಡೇಷನ್ ವತಿಯಿಂದ ಸರಸ್ವತಿಪುರಂನಲ್ಲಿ ನಿರ್ಮಾಣ ಮಾಡಿರುವ ಬಡ ವಿದ್ಯಾರ್ಥಿಗಳ ಉಚಿತ ವಸತಿ ನಿಲಯವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಂತದಲ್ಲೇ ತಮ್ಮ ಜೀವನದಲ್ಲಿ ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು. ಜೀವನಕ್ಕೆ ಒಂದು ನಿರ್ದಿಷ್ಟ ಗುರಿ ಇರಬೇಕು. ಅದನ್ನು ಮುಟ್ಟಲು ನಿರಂತರವಾಗಿ ಪರಿಶ್ರಮ ಹಾಕಬೇಕು. ಓದು, ಜ್ಞಾನ ನಮ್ಮದಾಗಬೇಕಾದರೆ, ಉತ್ತಮ ಸ್ನೇಹಿತರೊಂದಿಗೆ ಬೆರೆಯಬೇಕು. ಕೇವಲ ಪಠ್ಯಕ್ಕೆ ಸೀಮಿತರಾಗದೆ, ವ್ಯಕ್ತಿತ್ವ ವಿಕಸನ ಮಾಡುವ ಪುಸ್ತಕಗಳನ್ನು ಹೆಚ್ಚೆಚ್ಚು ಓದಬೇಕು ಎಂದು ಸಲಹೆ ನೀಡಿದರು.

ಬಸವಮಾರ್ಗ ಫೌಂಡೇಷನ್ ಅಧ್ಯಕ್ಷ ಎಸ್.ಬಸವರಾಜು ಮಾತನಾಡಿ, ಕುಡಿತಕ್ಕೆ ದಾಸನಾಗಿದ್ದ ನನಗೆ ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರ ಮರು ಹುಟ್ಟು ನೀಡಿತು. ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂದು ಕಳೆದ ಐದು ವರ್ಷಗಳಿಂದ ವ್ಯಸನಿಗಳ ಸೇವೆ ಮಾಡಲಾಗುತ್ತಿದೆ. ಅದು ಇಷ್ಟಕ್ಕೇ ನಿಲ್ಲಬಾರದು ಎನ್ನುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಯಲ್ಲಿ ಓದುವ ಬಡ ಮಕ್ಕಳಿಗೆ ವಸತಿ ನಿಲಯ ತೆರೆಯಲಾಗಿದೆ. ಈಗಾಗಲೇ ಕುಕ್ಕರಹಳ್ಳಿ ಸರ್ಕಾರಿ ಪ್ರೌಢಶಾಲೆಯನ್ನು ದತ್ತು ಪಡೆಯಲಾಗಿದೆ. ಈ ಶಾಲೆಯ ಗ್ರಾಮಾಂತರ ಮಕ್ಕಳಿಗೆ ಉಚಿತವಾಗಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

5ನೇ ತರಗತಿಯಿಂದ 10ನೇ ತರಗತಿವರೆಗಿನ ಬಾಲಕರಿಗೆ ಈ ವಸತಿ ನಿಲಯವನ್ನು ತೆರೆಯಲಾಗಿದೆ. ಈ ಮಕ್ಕಳಿಗೆ ಪ್ರತಿ ವಿಷಯಕ್ಕೂ ಶಿಕ್ಷಕರನ್ನು ನೇಮಿಸಲಾಗಿದೆ. ಜತೆಗೆ ಕೌಶಲ ಕಲಿಕೆಗೆ ಒತ್ತು ನೀಡಲಾಗಿದೆ. ಸದ್ಯ ಕುಕ್ಕರಹಳ್ಳಿ ಸರ್ಕಾರಿ ಶಾಲೆಯ 21 ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದು, ವ್ಯಸನಕ್ಕೆ ದಾಸರಾಗಿದ್ದವರು ಹಾಗೂ ಬಡ ಮಕ್ಕಳನ್ನು ನಮ್ಮಲ್ಲಿ ದಾಖಲಿಸಬಹುದು. ಬಡ ಮಕ್ಕಳೂ ಕೂಡ ಶ್ರೀಮಂತರಾಗಬೇಕು ಎನ್ನುವುದು ನಮ್ಮ ಆಶಯ ಎಂದು ತಿಳಿಸಿದರು.

ಜಿಪಂ ಮಾಜಿ ಸದಸ್ಯ ಎನ್.ಮಹದೇವ್, ಕರ್ನಾಟಕ 24 ಮನೆ ತೆಲುಗು ಶೆಟ್ಟರ ಸಂಘದ ಉಪಾಧ್ಯಕ್ಷ ಅಪ್ಪಾಜಿ, ಸಹ ಕಾರ್ಯದರ್ಶಿ ನಾಗರಾಜ್ ಶೆಟ್ಟರು, ಖಜಾಂಚಿ ಶ್ರೀಧರ ಮೂರ್ತಿ, ಪ್ರೇರಣಾ ಸಂಸ್ಥೆಯ ನಿರ್ದೇಶಕ ನಿರಂಜನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net