

ಹುಣಸೂರು: ಜೀವನದಲ್ಲಿ ಯಾರಿಗೂ ತಲೆಬಾಗದೇ ಸ್ವಾಭಿಮಾನದಿಂದ ಬದುಕುವುದೇ ನಿಜವಾದ ಸಾಧನೆ ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ 2024-25ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್ ಇತರ ಚಟುವಟಿಕಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಈ ದೇಶದ ಭವಿಷ್ಯ ಯುವಕರ ಕೈಯಲ್ಲಿದೆ. ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ಭಾಗವಹಿಸಬೇಕು. ಸಾಧಿಸುವ ಛಲ ನಿಮ್ಮಲಿರಬೇಕು. ಪಾಲಕರು ಮತ್ತು ಕಾಲೇಜು ನಿಮ್ಮ ಅಗತ್ಯಗಳನ್ನು ಪೂರೈಸುತ್ತದೆ. ಆದರೆ ಸಾಧನೆಯ ಛಲ ನಿಮ್ಮಲ್ಲಿಲ್ಲದಿದ್ದರೆ ಪ್ರಯೋಜನವಿಲ್ಲ. ಪರೀಕ್ಷಾ ಫಲಿತಾಂಶಗಳಲ್ಲಿ ವಿದ್ಯಾರ್ಥಿನಿಯರು ಯಾವಾಗಲೂ ಮೇಲುಗೈ ಸಾಧಿಸುತ್ತಾರೆ. ಆದರೆ ಅಷ್ಟೇ ಪ್ರಮಾಣದ ಸಾಧನೆ ನಂತರದ ದಿನಗಳಲಿ ಕಾಣಿಸದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜೀವನದಲ್ಲಿ ಎಂದಿಗೂ ಯಾರಿಗೂ ತಲೆಬಾಗುವಂತಹ ಕಾರ್ಯ ಮಾಡದೇ ಸ್ವಾಭಿಮಾನದಿಂದ ಬದುಕುವುದನ್ನು ಕಲಿಯಬೇಕು. ಅದೇ ಜೀವನದ ಸಾಧನೆಯಾಗುತ್ತದೆ. ಪಾಲಕರು ಹೆಮ್ಮೆ ಪಡುತ್ತಾರೆ. ತಿ.ನರಸೀಪುರ ತಾಲೂಕಿನ ಕುಗ್ರಾಮ ಕುರುಬೂರಿನ ಮಗಳು ಚೈತ್ರಾ ಖೋ ಖೋ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಾರೆಂದರೆ ಅವರೇ ನಿಮ್ಮ ಸ್ಫೂರ್ತಿಯ ಸೆಲೆಯಾಗಬೇಕು. ನಾನು ಮೈಸೂರಿನಲ್ಲಿ ಆಯೋಜಿಸುತ್ತಿದ್ದ ಮ್ಯಾರಥಾನ್ ಓಟದಲ್ಲಿ ಕಾಲಿಗೆ ಚಪ್ಪಲಿ, ಶೂ ಕೂಡ ಇಲ್ಲದೆ ಓಡಲು ಬಂದಿದ್ದ ಬಾಲಕಿ ಇವರು. ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನನ್ನು ಗುರಿತಿಸಕೊಂಡಿದ್ದಾರೆಂದರೆ ಇದಕ್ಕಿಂತ ಮಾದರಿ ನಿಮಗೆ ಇನ್ಯಾರು ಬೇಕು? ಹಾಗಾಗಿ ಸಾಧನೆಗೆ ಹಠ, ಛಲ ಇರಲಿ. ಗುರಿಯಲ್ಲಿ ಸ್ಪಷ್ಟತೆ ಇರಲಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕೆ.ಆರ್.ನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಡಾ.ಲತಾ, ನಗರಸಭಾಧ್ಯಕ್ಷ ಗಣೇಶ್ ಕುಮಾರಸ್ವಾಮಿ, ಉಪಾಧ್ಯಕ್ಷೆ ಆಶಾ ಕೃಷ್ಣನಾಯಕ ಮಾತನಾಡಿದರು. ಪ್ರಾಂಶುಪಾಲ ಪ್ರೊ.ಮಂಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕರಾದ ಪ್ರೊ.ರಾಜಶೇಖರನ್, ಬಿ.ಹನುಮಂತಪ್ಪ, ಡಾ.ಕೆ.ಪಿ.ಪ್ರಸನ್ನ, ಡಾ.ಕಲಾಶ್ರೀ, ಡಾ.ಎನ್.ಪಿ.ಆರ್ ಕೇಸರ್ಕರ್, ಡಾ.ಕಾವ್ಯಾ ಸೇರಿದಂತೆ ವಿದ್ಯಾರ್ಥಿನಿಯರು ಹಾಜರಿದ್ದರು.
ಇದೇ ವೇಳೆ ಖೋಖೋ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯ ಬಿ.ಚೈತ್ರಾ ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಸ್ಮರಣ ಸಂಚಿಕೆ ಅಮೃತ್ ಮಹಲ್ ಅನ್ನು ಬಿಡುಗಡೆಗೊಳಿಸಲಾಯಿತು.