

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಾನವನ ನೈತಿಕ ಮೌಲ್ಯಗಳು ಹಳಸುತ್ತಿರುವ ಕಾಲದಲ್ಲಿ ಸದಾಚಾರ ತಳಹದಿಯ ಮೇಲೆ ನಿರ್ಮಿತವಾದ ಬಸವಾದಿ ಪ್ರಮಥರ ತತ್ವಗಳ ಅರಿವನ್ನು ಮೂಡಿಸಬೇಕು. ತಾತ್ವಿಕ ಹಿನ್ನಲೆಯಲ್ಲಿ ಶರಣರ ಬದುಕಿನ ನೆಲೆಯನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದು ಶ್ರೀ ಸಾಯಿ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಅಧ್ಯಕ್ಷೆ ಡಾ. ವೀಣಾ ಬಿರಾದಾರ ಹೇಳಿದರು.
ನಗರದ ಶ್ರೀ ಉಳವಿ ಚನ್ನಬಸವೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ್ದ ಶಿವಶರಣೆಯರ ವಚನದಲ್ಲಿ ಜೀವನ ಸಂದೇಶ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.
ಬಸವಾದಿ ಶರಣರು ಜನಸಾಮಾನ್ಯರಿಗಾಗಿ ವಚನ ರಚಿಸಿದರು. ಜಾತಿ, ಮತ, ಪಂಥಕ್ಕೆ ಮಹತ್ವ ನೀಡದ ಶರಣರು ಮಾನವೀಯತೆಗೆ ಮಹತ್ವ ಕೊಟ್ಟು ಎಲ್ಲರಿಗೂ ವಚನ ಸಾಹಿತ್ಯವನ್ನು ಕೊಡುಗೆಯಾಗಿ ನೀಡಿದರು. ಜನಮನ ಪರಿವರ್ತನೆ ಹಾಗೂ ಸಮಾಜದ ಸ್ವಾಸ್ಥ÷್ಯ ಕಾಪಾಡಿದ ಶಿವ ಶರಣರು ರಚಿಸಿದ ವಚನ ಸಾಹಿತ್ಯ ಸತ್ಯದ ಮೂಲವಾಗಿದೆ. ಸತ್ಯ, ದಾನ, ದಯೆ, ಕಾಯಕ, ದಾಸೋಹ, ತತ್ವಗಳು ಶರಣರ ಸಂದೇಶಗಳು. ಇವು ಮಾನವ ಕುಲಕ್ಕೆ ಸಾರ್ವಕಾಲಿಕ ದಾರಿದೀಪವಾಗಿವೆ ಎಂದರು.
ದೇವಸ್ಥಾನ ಆಡಳಿತ ಮಂಡಳಿಯ ಆರ್.ವೈ. ಸುಳ್ಳದ, ಬಸವರಾಜ ಸೂರಗೊಂಡ, ಟಿ.ಎಸ್. ಪಾಟೀಲ, ಸುರೇಶ ಹೆಗ್ಗೇರಿ, ಎನ್.ಬಿ. ಗೋಲಣ್ಣವರ, ಸುರೇಶ ಪಟ್ಟಣಶೆಟ್ಟಿ, ಎಸ್.ಬಿ. ಪಾಗದ, ಗಿರಿಜಾ ಕಲ್ಯಾಣಶೆಟ್ಟರ, ಡಾ. ವಿಜಯಾ ಅಂಗಡಿ, ಇತರರಿದ್ದರು.