

ಹೊಸದುರ್ಗ: ಧರ್ಮಸ್ಥಳ ಕ್ಷೇತ್ರ ಹಾಗೂ ಧರ್ಮಾಧಿಕಾರಿ ಡಾ. ಶ್ರೀ ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಸುಳ್ಳು ಪ್ರಚಾರದಲ್ಲಿ ತೊಡಗಿರುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಮಾಜಿ ಶಾಸಕ ಇಲ್ಕಲ್ ವಿಜಯಕುಮಾರ್ ಒತ್ತಾಯಿಸಿದರು.
ಕ್ಷೇತ್ರ ಧರ್ಮಸ್ಥಳ ಭಕ್ತವೃಂದ ಪಟ್ಟಣದ ದುರ್ಗಾಂಭಿಕಾ ದೇವಿ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಭಕ್ತರ ಜಾಗೃತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಳೆದ 11 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಭಂಧಿಸಿದಂತೆ ಸಿಬಿಐ ತನಿಖೆ ನಡೆದಿದೆ. ಮರು ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ. ಬಾಲಕಿಯ ಸಾವಿಗೆ ನ್ಯಾಯ ದೊರಕಲಿ. ಅದರೆ, ಈ ಪ್ರಕರಣ ಮುಂದಿಟ್ಟುಕೊಂಡು ಧರ್ಮಸ್ಥಳದ ಪಾವಿತ್ರ್ಯ ಹಾಳು ಮಾಡುವುದು. ಶ್ರೀ ವೀರೆಂದ್ರ ಹೆಗ್ಗಡೆ ಅವರ ತೆಜೋವಧೆ ಮಾಡುವುದು ಸರಿಯಲ್ಲ ಎಂದರು.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಮೂಲಕ ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಚೈತನ್ಯ ನೀಡುವಂತಹ ಕೆಲಸ ಮಾಡುತ್ತಿರುವ ಧರ್ಮಾಧಿಕಾರಿಗಳ ಜನಕಲ್ಯಾಣವನ್ನು ಸಹಿಸದ ಕಿಡಿಗೇಡಿಗಳು ಇಂತಹ ಕೆಲಸದಲ್ಲಿ ತೊಡಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿನಿತ್ಯ ಧರ್ಮಸ್ಥಳಕ್ಕೆ ಭೇಟಿ ನೀಡುವ ಸಾವಿರಾರು ಭಕ್ತರಿಗೆ ವಸತಿ, ಅನ್ನಪ್ರಸಾದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಇಂತಹವರ ವಿರುದ್ಧ ವ್ಯವಸ್ಥಿತವಾದ ಸಂಚು ರೂಪಿಸಲಾಗುತ್ತಿದೆ. ಕೂಡಲೇ ಸರ್ಕಾರ ಕ್ರಮಕೈಗೊಳ್ಳಬೇಕು. ಸುಳ್ಳು ಪ್ರಚಾರ ನಿಲ್ಲಿಸದಿದ್ದರೆ 50 ಸಾವಿರ ಜನರ ನೇತೃತ್ವದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಜನಜಾಗೃತಿ ವೇದಿಕೆ ಸದಸ್ಯ ತುಂಬಿನಕೆರೆ ಬಸವರಾಜ್ ಮಾತನಾಡಿ, ದಕ್ಷಿಣ ಭಾರತದ ಕಾಶಿ ಎಂದು ನಂಬಿರುವ ಧರ್ಮಸ್ಥಳ ಕ್ಷೇತ್ರದ ವಿರುದ್ಧ ಮಾತನಾಡುವ ದುಷ್ಟಶಕ್ತಿಗಳನ್ನು ಮಟ್ಟಹಾಕುವುದು ಅನಿವಾರ್ಯವಾಗಿದೆ. ಹೆಗ್ಗಡೆ ಅವರ ವಿರುದ್ಧ ಹೇಳಿಕೆಗಳು ನಿಲ್ಲದಿದ್ದರೆ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮಾಜಿ ಶಾಸಕ ಟಿ.ಎಚ್.ಬಸವರಾಜಪ್ಪ, ಕೆಪಿಸಿಸಿ ಸದಸ್ಯರಾದ ಅಲ್ತಾಪ್ ಪಾಷಾ, ಎಂ.ಪಿ.ಶಂಕರ್, ಉದ್ಯಮಿ ಕೆ.ಎಸ್.ಕಲ್ಮಠ್, ಇಲ್ಕಲ್ ಅಜ್ಜಪ್ಪ, ಬ್ರಹ್ಮಪಾಲ್, ಆಗ್ರೋ ಶಿವಣ್ಣ, ಬಿ.ಪಿ.ಓಂಕಾರಪ್ಪ, ರಾಗಿ ಶಿವಮೂರ್ತಿ, ಪುರಸಭಾ ಸದಸ್ಯರಾದ ದಾಳಿಂಬೆ ಗಿರೀಶ್, ಜಾಫರ್ ಸಾಧಿಕ್, ಪ್ರಶಾಂತ, ನಾಗರಾಜ್ ಮತ್ತಿತರಿದ್ದರು.