ಪ್ರಧಾನಿಗೆ ರಕ್ತದಲ್ಲಿ ಪತ್ರ ಬರೆದ ಕರವೇ

MKG
Published on

ಜಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ನೀರು ನ್ಯಾಯ ಮಂಡಳಿ ಆದೇಶಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ತಕ್ಷಣ ಮಧ್ಯ ಪ್ರವೇಶಿಸುವಂತೆ ಒತ್ತಾಯಿಸಿ ಮಂಗಳವಾರ ಕರ್ನಾಟಕ ರಕ್ಷಣ ವೇದಿಕೆ (ಟಿ.ಎ. ನಾರಾಯಣಗೌಡ ಬಣ) ಕಾರ್ಯಕರ್ತರು ಪ್ರಧಾನಿಗೆ ರಕ್ತದಲ್ಲಿ ಪತ್ರ ಬರೆಯುವ ಚಳವಳಿ ನಡೆಸಿದರು.

ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ತೆಗೆದು ಪ್ರವಾಸಿ ಮಂದಿರದಲ್ಲಿ ರಕ್ತದಲ್ಲಿ ಪತ್ರ ಬರೆದು ಅಂಚೆ ಕಚೇರಿಯಲ್ಲಿ ಪ್ರಧಾನಿಗೆ ಪೋಸ್ಟ್ ಮಾಡಿದರು.

ಕರವೇ ತಾಲೂಕಾಧ್ಯಕ್ಷ ವೈ. ಮಹಾಂತೇಶ್ ಮಾತನಾಡಿ, ಕಾವೇರಿ ವಿಷಯದಲ್ಲಿ ಪ್ರಧಾನಿ ಮಧ್ಯಪ್ರವೇಶಿಸಿ ನಾಲ್ಕು ರಾಜ್ಯಗಳ ಮಂತ್ರಿಗಳನ್ನು ಒಗ್ಗೂಡಿಸಿ ಅವರ ಜತೆ ಮಾತುಕತೆ ನಡೆಸಿ ಕಾವೇರಿ ವಿವಾದ ಬಗೆಹರಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಕಾವೇರಿ ಸಮಸ್ಯೆ ವ್ಯಾಪಕವಾಗಿ ಹರಡಿಕೊಂಡಿದೆ. ಪ್ರತಿಭಟನೆ, ಧರಣಿ, ಕರ್ನಾಟಕ ಬಂದ್ ಹೀಗೆ ವಿವಿಧ ರೀತಿಯಲ್ಲಿ ಕನ್ನಡಿಗರು ವಿರೋಧಿಸುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರ ಈ ಬಗ್ಗೆ ಒಂದು ಪ್ರತಿಕ್ರಿಯೆ ನೀಡದೇ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ. ಚುನಾವಣೆಯಲ್ಲಿ ಹತ್ತಾರು ಬಾರಿ ಪ್ರವಾಸ ಮಾಡಿದ ಪ್ರಧಾನಿ ಈಗ ಏಕೆ ರಾಜ್ಯಕ್ಕೆ ಭೇಟಿ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಕ್ತದಲ್ಲಿ ಪತ್ರ ಬರೆಯುವ ಚಳವಳಿ ಒಂದು ವಾರದವರೆಗೂ ನಡೆಯಲಿದ್ದು, ಇದಕ್ಕೆ ಪ್ರತಿಯೊಬ್ಬರು ಸಹಕರಿಸಬೇಕೆಂದು ಕೋರಿದರು.

ಮಹಿಳಾ ಅಧ್ಯಕ್ಷೆ ರೇಖಾ ಶಂಭುಲಿಂಗಪ್ಪ, ಕಾರ್ಯದರ್ಶಿ ಮಂಜುಳಾ ಮಂಜುನಾಥ್, ಚಂಪಾವತಿ, ಉಪಾಧ್ಯಕ್ಷ ಅಫೀಜ್, ಗೌರವಾಧ್ಯಕ್ಷ ಸುರೇಶ್, ನವೀನ್, ಗೊಲ್ಲರಹಟ್ಟಿ ತಿಪ್ಪೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net