ಮೈಸೂರು: ದೇವನೂರ ಮಹಾದೇವ ಅವರ ಎದೆಗೆ ಬಿದ್ದ ಅಕ್ಷರ ಕೃತಿಯನ್ನು ರಂಗರೂಪಕ್ಕೆ ಇಳಿಸಿ ಕಾವಲು ಮನೆ ಸಾಂಸ್ಕೃತಿಕ ಕೇಂದ್ರದಿಂದ ನಾಲ್ಕು ದಿನಗಳ ಕಾಲ ರಂಗ ಪ್ರಯೋಗ ಮಾಡಲಾಗುತ್ತಿದೆ ಎಂದು ರಂಗಾಯಣದ ಮಾಜಿ ನಿರ್ದೇಶಕ ಸಿ.ಬಸವಲಿಂಗಯ್ಯ ತಿಳಿಸಿದರು.
ಮೇ 4, 9, 23 ಹಾಗೂ 25 ರಂದು ನಿತ್ಯ ಸಂಜೆ 6.30ಕ್ಕೆ ನಗರದ ಕಲಾಮಂದಿರದ ಆವರಣದ ಕಿರು ರಂಗಮಂದಿರದಲ್ಲಿ ರಂಗ ಪ್ರಯೋಗ ಪ್ರದರ್ಶಿಸಲಾಗುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪರಿಕಲ್ಪನೆ, ಸಂಗೀತ, ನಿರ್ದೇಶನ ನನ್ನದೇ ಆಗಿದೆ. ಕಾವಲು ಮನೆ ಸಾಂಸ್ಕೃತಿಕ ಕೇಂದ್ರ ತಮ್ಮನ್ನು ಯಾವುದಾದರೊಂದು ನಾಟಕವನ್ನು ಪ್ರದರ್ಶಿಸಲು ಸಲಹೆ ಕೇಳಿದಾಗ, ಸಾಮಾನ್ಯ ನಾಟಕ ಬೇಡ ಎಂದು ವಿಶಿಷ್ಟ ಎನಿಸಲಿರುವ ದೇವನೂರ ಮಹಾದೇವ ಅವರ ಈ ಕೃತಿಯನ್ನೇ ರಂಗರೂಪಕ್ಕೆ ಇಳಿಸಿದ್ದಾಗಿ ಹೇಳಿದರು.
ಇದು ದೇವನೂರ ಮಹಾದೇವ ಅವರ ಮನೋ ವೈಚಾರಿಕ ಬರಹಗಳ ಸಂಕಲನವಾಗಿದೆ. ಕನ್ನಡ ಸಾಹಿತ್ಯದ ಪ್ರಮುಖ ಚಿಂತಕ ಮತ್ತು ಹೋರಾಟಗಾರರೂ ಇವರಾಗಿದ್ದಾರೆ. ರಂಗರೂಪ ಎಸ್.ನಟರಾಜ್ ಬೂದಾಳ್ ಅವರದ್ದಾಗಿದೆ. ಈ ಕೃತಿ ಸಮಾಜವಾದಿ ಚಿಂತನೆಯ ಈ ಕಾಲಕ್ಕೆ ಯೋಗ್ಯವಾದ ಸಾಂಸ್ಕೃತಿಕ ಪಠ್ಯವಾಗಿ ಓದುಗರಿಗೆ ನಿರಂತರ ಅರಿವಿನ ದಿಕ್ಕು ತೋರಿಸುತ್ತದೆ ಎಂದು ವಿವರಿಸಿದರು.
ಆಯೋಜಕರಾದ ರಾಜೇಶ್ ತಲಕಾಡು, ಕೀರ್ತಿಗೌಡ, ಸುಧೀರ್‌ಕುಮಾರ್ ಹಾಜರಿದ್ದರು.