ದಯಾಮರಣ ಕೋರಿ ರಕ್ತದಲ್ಲಿ ಪತ್ರ

RAKTA
Published on

ನವಲಗುಂದ: ಶೀಘ್ರವೇ ಮಹದಾಯಿ, ಕಳಸಾ-ಬಂಡೂರಿ ಯೋಜನೆ ಕಾಮಗಾರಿ ಆರಂಭಿಸಬೇಕು ಹಾಗೂ ರೈತರ ಮೇಲಿನ ಕೇಸ್ ವಾಪಸ್ ಪಡೆಯಬೇಕು. ಇಲ್ಲದಿದ್ದರೆ, ದಯಾಮರಣಕ್ಕೆ ಅವಕಾಶ ನೀಡಬೇಕು ಎಂದು ಕೋರಿ ಪಟ್ಟಣದ ರೈತ ಮೈಲಾರಪ್ಪ ಕುಬೇರಪ್ಪ ವೈದ್ಯ ಅವರು ಪ್ರಧಾನಿ, ಮುಖ್ಯಮಂತ್ರಿ ಹಾಗೂ ಸಂಸದ ಪ್ರಹ್ಲಾದ ಜೋಶಿ ಅವರಿಗೆ ರಕ್ತದಲ್ಲಿ ಮನವಿ ಪತ್ರ ಬರೆದು ತಹಸೀಲ್ದಾರ್ ಮೂಲಕ ಶುಕ್ರವಾರ ಸಲ್ಲಿಸಿದರು.

ಮಹದಾಯಿ, ಕಳಸಾ-ಬಂಡೂರಿ ಯೋಜನೆ ಜಾರಿಗೆ ಒತ್ತಾಯಿಸಿ 43 ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ಕುಡಿಯುವ ನೀರಿನ ಯೋಜನೆಯಲ್ಲಿ ರಾಜಕೀಯ ಮಾಡಬಾರದು. ಇದು ನಾಲ್ಕು ಜಿಲ್ಲೆಯ 12 ತಾಲೂಕಿನ 500 ಗ್ರಾಮಗಳಿಗೆ ಪ್ರಮುಖವಾಗಿ ಹುಬ್ಬಳ್ಳಿ-ಧಾರವಾಡ ಜನತೆಗೆ ಈ ಯೋಜನೆ ಅವಶ್ಯವಿದೆ. ಎಲ್ಲ ಕಡೆ 247 ನಿರಂತರ ನೀರು ಪೂರೈಕೆ ಯೋಜನೆ ಅನುಷ್ಠಾನಕ್ಕೆ ತರಲಾಗುತ್ತಿದೆ. ಇದಕ್ಕೆ ನೀರು ಎಲ್ಲಿಂದ ಸರಬರಾಜು ಮಾಡುತ್ತೀರಿ? ಈ ವರ್ಷ ಈ ಭಾಗದ ಜನರಿಗೆ ಕುಡಿಯುವ ನೀರು ಸಿಗದೆ ಒದ್ದಾಡುತ್ತಿದ್ದಾರೆ. ದಯಮಾಡಿ ಬೇಗನೆ ಕಾಮಗಾರಿ ಆರಂಭಿಸಬೇಕು. ಸಿದ್ದರಾಮಯ್ಯನವರು 2016-17ರಲ್ಲಿ ಮುಖ್ಯಮಂತ್ರಿ ಇದ್ದಾಗ ಲಾಠಿಚಾರ್ಜ್ ಆಗಿ ಜೈಲು ಕಂಡಿದ್ದೇವೆ. ಅಲ್ಲಿಂದ ಇಲ್ಲಿಯವರೆಗೆ ರೈತ ಹೋರಾಟಗಾರರ ಹಾಗೂ ಅಮಾಯಕರ ಮೇಲೆ ಪೊಲೀಸ್ ಕೇಸ್ ಹಾಕಿ ವಿನಾಕಾರಣ ತೊಂದರೆ ನೀಡಲಾಗುತ್ತಿದೆ. ನವಲಗುಂದ-ನರಗುಂದ, ಹುಬ್ಬಳ್ಳಿ-ಧಾರವಾಡ ಹಾಗೂ ಗದಗದಲ್ಲಿ ಬಾಕಿ ಇರುವ ಎಲ್ಲ ರೈತರ ಮೇಲಿನ ಪೊಲೀಸ್ ಕೇಸ್​ಗಳನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೆ ದಯಾ ಮರಣಕ್ಕೆ ಅನುಮತಿ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net