

ಹಾನಗಲ್ಲ: ವಾಹನ ಚಲಾಯಿಸುವಾಗ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮೀರಿದರೆ ದಂಡ ವಿಧಿಸಲಾಗುವುದು ಹಾಗೂ ವಾಹನವನ್ನು ವಶಕ್ಕೆ ಪಡೆಯಲಾಗುವುದು ಎಂದು ಸಿಪಿಐ ಎಸ್.ಆರ್. ಶ್ರೀಧರ ಎಚ್ಚರಿಸಿದರು.
ಪಟ್ಟಣದಲ್ಲಿ ಪಿಎಸ್‌ಐ ಯಲ್ಲಪ್ಪ ಹಿರಗಣ್ಣನವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಶುಕ್ರವಾರ ಕಾರ್ಯಾಚರಣೆ ಕೈಗೊಂಡು ಸಂಚಾರ ನಿಯಮಗಳನ್ನು ಉಲ್ಲಂಘಿಸುವ ವಾಹನಗಳ ಸವಾರರನ್ನು ಪೊಲೀಸ್ ಠಾಣೆಗೆ ಕರೆತಂದು ದಂಡ ವಿಧಿಸಿ, ಕಾನೂನು ಪಾಲನೆಯ ಪಾಠ ಹೇಳಿದ್ದಲ್ಲದೆ, ಪ್ರತಿಜ್ಞಾವಿಧಿ ಬೋಧಿಸಿದರು. ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಬೈಕ್ ಚಲಾಯಿಸುವುದು, ಎಲ್ಲೆಂದರಲ್ಲಿ ನಿಲ್ಲಿಸುವವರಿಗೆ ಪಾಠ ಕಲಿಸಿದರು.
ರಸ್ತೆ ನಿಯಮ ಉಲ್ಲಂಘಿಸಿದ 25 ಬೈಕ್‌ಗಳನ್ನು ವಶಕ್ಕೆ ಪಡೆದು, ಸವಾರರಿಗೆ ದಂಡ ವಿಧಿಸಿದ್ದಾರೆ. ಮಕ್ಕಳು ಓಡಿಸುತ್ತಿದ್ದ ಬೈಕ್‌ಗಳನ್ನು ವಶಪಡಿಸಿಕೊಂಡು, ಪಾಲಕರನ್ನು ಕರೆಯಿಸಿ, ಸಂಚಾರ ನಿಯಮಗಳ ಕುರಿತು ಪಾಠ ಮಾಡಿದರು. ನಂತರ ಎಲ್ಲರನ್ನೂ ಸಾಲಾಗಿ ನಿಲ್ಲಿಸಿ ಸಂಚಾರ ನಿಯಮಗಳನ್ನು ತಪ್ಪದೆ ಪಾಲಿಸುತ್ತೇವೆಂದು ಪ್ರತಿಜ್ಞೆ ಮಾಡಿಸಿದರು. ಅಷ್ಟಕ್ಕೆ ಬಿಟ್ಟರೆ ಮತ್ತದನ್ನೇ ಮುಂದುವರಿಸುತ್ತಾರೆಂದು ತಲಾ 500 ರೂ. ದಂಡ ವಿಧಿಸಿ, ಎಚ್ಚರಿಕೆ ನೀಡಿದ್ದಾರೆ.
ಪಾಲಕರು ಸಣ್ಣ ಮಕ್ಕಳ ಕೈಗೆ ಬೈಕ್‌ಗಳನ್ನು ನೀಡಿದರೆ ಅದಕ್ಕೆಲ್ಲ ಪಾಲಕರೇ ಜವಾಬ್ದಾರರಾಗುತ್ತಾರೆ. ವಾಹನಗಳ ವಿಮೆ ಮಾಡಿಸುವುದೂ ಕಡ್ಡಾಯವಾಗಿದ್ದು, ವಿಮೆಗೆ ಒಳಪಡದ ವಾಹನಗಳ ತಪಾಸಣೆ ಕೈಗೊಂಡು, ದಂಡ ವಿಧಿಸಲಾಗುವುದು. ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇನ್ನು ಮುಂದೆ ವಾಹನ ನಿಯಮ ಉಲ್ಲಂಘಿಸಿ ಬೇಕಾಬಿಟ್ಟಿಯಾಗಿ ವಾಹನ ಚಲಾಯಿಸಿದರೆ ಕಾನೂನು ಕ್ರಮ ನಿಶ್ಚಿತವಾಗಿ ಎದುರಿಸಬೇಕಾಗುತ್ತದೆ. ಎರಡಕ್ಕಿಂತ ಹೆಚ್ಚು ಬಾರಿ ದೂರು ದಾಖಲಾದರೆ ಅವರ ಲೈಸೆನ್ಸ್ ರದ್ದುಪಡಿಸಲಾಗುವುದು ಎಂದು ಶ್ರೀಧರ ಎಚ್ಚರಿಸಿದ್ದಾರೆ.