ಶಿಥಿಲಾವಸ್ಥೆ ಕಟ್ಟಡದಲ್ಲೇ ವಿದ್ಯಾರ್ಥಿಗಳಿಗೆ ಪಾಠ

2222
Published on

ಜಿ.ನಾಗರಾಜ್​ ಬೂದಿಕೋಟೆ

ಮಕ್ಕಳಿಗೆ ಪಾಠ&ಪ್ರವಚನಗಳ ಮೂಲಕ ಉತ್ತಮ ಶಿಕ್ಷಣ ನೀಡಿ ಅವರನ್ನು ಜೀವನದಲ್ಲಿ ಯಶಸ್ವಿ ವ್ಯಕ್ತಿಗಳನ್ನಾಗಿ ಮಾಡುವ ಶಕ್ತಿ ಶಾಲೆಗಳು ಮತ್ತು ಅಲ್ಲಿರುವ ಬದ್ಧತೆಯ ಅಧಿಕಾರಿ, ಶಿಕ್ಷಕರಿಗಿದೆ. ಆದರೆ, ಶಾಲೆಗಳೇ ಮಕ್ಕಳಿಗೆ ಮೃತ್ಯು ಕೂಪಗಳಾಗಿ ಪರಿವರ್ತನೆಯಾದರೆ, ವಿದ್ಯಾರ್ಥಿಗಳಿಗೆ ಭವಿಷ್ಯದ ದಿನಗಳನ್ನೂ ನೋಡದ ಪರಿಸ್ಥಿತಿ ಎದುರಾಗುವ ಆತಂಕ ಎದುರಾಗಿದೆ.

ಬಂಗಾರಪೇಟೆ ತಾಲೂಕು ಡಿಕೆ ಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು, ಮೇಲ್ಛಾವಣಿ ಉದುರುತ್ತಿವೆ. ವಿದ್ಯಾರ್ಥಿಗಳು ಪ್ರಾಣ ಭಯದಿಂದಲೇ ಪಾಠ ಪ್ರವಚನ ಕೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಡಿಕೆಹಳ್ಳಿ ಗ್ರಾಮದ ಸುತ್ತಮುತ್ತಲಿನ ಸುಮಾರು 40 ಹಳ್ಳಿಗಳಲ್ಲಿ ಶಾಲೆಯೇ ಇಲ್ಲದಿರುವಾಗ 1929ರಲ್ಲಿ ಮಕ್ಕಳ ಕಲಿಕೆಗೆ ಶಾಲೆ ಆರಂಭಿಸಲಾಯಿತು. ಆಗ ನಿರ್ಮಿಸಿದ ಕಟ್ಟಡಕ್ಕೆ ಈಗ 95 ವರ್ಷವಾಗಿದ್ದು, ಶಾಲೆಯ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದೆ. ಕಟ್ಟಡದ ಮೇಲ್ಛಾವಣಿ ಮಕ್ಕಳ ಮೇಲೆ ಬೀಳುವುದು ಸಾಮಾನ್ಯವಾಗಿದ್ದು, ಮಳೆ ಬಂದರೆ ಸೋರುತ್ತದೆ. ವಿಧಿಯಿಲ್ಲದೇ ಮಕ್ಕಳು ಇದೇ ಶಾಲೆಯಲ್ಲಿ ಕೂತು ಪಾಠ ಕೇಳಬೇಕಾದ ಪರಿಸ್ಥಿತಿ ಎದುರಾಗಿದೆ.

ಅಳಿವಿನಂಚಿನಲ್ಲಿರುವ ಶಾಲೆಯ ಕಟ್ಟಡ ಗ್ರಾಮ ಪಂಚಾಯಿತಿಗೆ ಸುಮಾರು 200 ಮೀಟರ್​ ದೂರದಲ್ಲಿದೆ. ತಾಲೂಕಿನಲ್ಲೇ ಅತಿ ದೊಡ್ಡ ಪಂಚಾಯಿತಿ ಮತ್ತು ಹೆಚ್ಚು ಆದಾಯ ಬರುವಂತಹ ಪಂಚಾಯಿತಿ ಇದಾಗಿದ್ದು, ಇಲ್ಲಿನ ಜನಪ್ರತಿನಿಧಿಗಳಾಗಲಿ, ಪಂಚಾಯಿತಿ ಆಡಳಿತ ಮಂಡಳಿಯಗಲೀ ಶಾಲಾ ಕಟ್ಟಡ ಅಭಿವೃದ್ಧಿಪಡಿಸಲು ಮುಂದಾಗದೇ ಇರುವುದು ದುರ್ದೈವದ ಸಂಗತಿಯಾಗಿದೆ.

ಡಿಕೆಹಳ್ಳಿಯ ಸರ್ಕಾರಿ ಶಾಲೆಯಲ್ಲಿ 1 ರಿಂದ 7ನೇ ತರಗತಿವರೆಗೂ ಶಿಕ್ಷಣ ನೀಡಲಾಗುತ್ತಿದ್ದು, ಈ ಹಿಂದೆ ಸುಮಾರು 100ಕ್ಕೂ ಮೇಲ್ಪಟ್ಟ ಮಕ್ಕಳು ಶಾಲೆಗೆ ಬರುತ್ತಿದ್ದರು. ಕಟ್ಟಡಗಳು ಶಿಥಿಲಗೊಂಡಿರುವ ಕಾರಣ ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುವುದಕ್ಕೆ ಹಿಂದೇಟು ಹಾಕಿ ಬೇರೆ ಶಾಲೆಗಳಿಗೆ ದಾಖಲಿಸಿದ ಕಾರಣ ಸದ್ಯ 27 ಮಕ್ಕಳು ಮಾತ್ರ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕಟ್ಟಡದ ದುರಸ್ತಿಗಾಗಿ ಪಂಚಾಯಿತಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಶಿಕ್ಷಕರು ಆರೋಪಿಸಿದ್ದಾರೆ.

ಬಂಗಾರಪೇಟೆ ತಾಲೂಕಿನಲ್ಲಿ 270 ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳು ಮತ್ತು 20 ಪ್ರೌಢಶಾಲೆಗಳಿವೆ. ಇವುಗಳ ಪೈಕಿ ಸಮಾರು 75 ಶಾಲೆಗಳ ಕೊಠಡಿಗಳು ಶಿಥಿಲಗೊಂಡಿದೆ. ಈ ಸಾಲಿನಲ್ಲಿ ಕೇವಲ 11 ಹೊಸ ಕಟ್ಟಡಗಳ ನಿರ್ಮಾಣಕ್ಕೆ ಸರ್ಕಾರ ಅನುದಾನ ಬಿಡುಗಡೆ ಮಾಡಿದ್ದು, ತುಂಬಾ ಶಿಥಿಲಗೊಂಡಂತಹ ಕಟ್ಟಡಗಳನ್ನು ಕೆಡವಿ ನೂತನ ಕಟ್ಟಡ ನಿರ್ಮಿಸಲಾಗುತ್ತದೆ ಎಂಬುದು ಅಧಿಕಾರಿಗಳ ಮಾಹಿತಿ. ಅಭಿವೃದ್ಧಿಗೆ ಸರ್ಕಾರದ ಅನುದಾನಕ್ಕೆ ಕಾಯದೇ ಸ್ಥಳಿಯ ಆಡಳಿತವಾದ ಪಂಚಾಯಿತಿಯಿಂದಾದರೂ ಗಮನಹರಿಸಿದರೆ ಮುಂದೆ ಆಗುವ ಅನಾಹುತ ತಪ್ಪಿಸಬಹುದು ಎಂದು ಸಾರ್ವಜನಿಕರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಾನು ಇದೆ ಶಾಲೆಯಲ್ಲಿ ಓದಿದ ವಿದ್ಯಾರ್ಥಿಯಾಗಿದ್ದು, ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಂದ ಬಂದು ಶಾಲೆಯಲ್ಲಿ ಓದಿದವರು ಇಂದು ಎಲ್ಲ ರಂಗಗಳಲ್ಲೂ ಉನ್ನತ ಸ್ಥಾನದಲ್ಲಿದ್ದಾರೆ. ಆದರೆ ಯಾರೊಬ್ಬರೂ ಶಾಲೆಯ ಅಭಿವೃದ್ಧಿಯ ಬಗ್ಗೆ ಗಮನ ಹರಿಸಿಲ್ಲ. - ವೆಂಕಟಾಚಲಪತಿ ಗ್ರಾಮಸ್ಥ ಡಿಕೆ ಹಳ್ಳಿ ಡಿಕೆ ಹಳ್ಳಿ ಶಾಲೆಗೆ 95 ವರ್ಷ ತುಂಬಿದ್ದು, ನೂರರ ಸಂಭ್ರಮಕ್ಕೆ ಸನಿಹದಲ್ಲಿದೆ. ಇಂತಹ ಸಂದರ್ಭದಲ್ಲಿ ಶಾಲೆಯ ಅವ್ಯವಸ್ಥೆ ನೋಡಿ ತುಂಬಾ ದು@ಖವಾಗುತ್ತದೆ. ಮಕ್ಕಳ ಮುಂದಿನ ಭವಿಷ್ಯದ ಹಿತದೃಷ್ಟಿಯಿಂದ ಶಿಕ್ಷಣ ಇಲಾಖೆ ಅಥವಾ ಪಂಚಾಯಿತಿ ಕಟ್ಟಡ ಅಭಿವೃದ್ಧಿಪಡಿಸಲು ಮುಂದಾಗಬೇಕು. - ಹೆಸರು ಹೇಳಲು ಇಚ್ಚಿಸದ ಶಿಕ್ಷಕಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗುತ್ತದೆ. ಸದ್ಯ14 ಕೊಠಡಿಗಳ ರಿಪೇರಿಗೆ ಸರ್ಕಾರದಿಂದ ಅನುದಾನ ಬಂದಿದ್ದು, ಆದ್ಯತೆಯ ಮೇರೆಗೆ ಶ್ರೀ ರಿಪೇರಿ ಕಾರ್ಯ ನಡೆಸಲಾಗುತ್ತದೆ. ಶಿಥಿಲಗೊಂಡ ಕಟ್ಟಡಗಳಲ್ಲಿ ಮಕ್ಕಳನ್ನು ಕೂರಿಸದೇ ಬೇರೆಡೆಗೆ ಸ್ಥಳಾಂತರಿಸಲು ಸೂಚಿಸಲಾಗಿದೆ. - ಗುರುಮೂರ್ತಿ ಬಿಇಒ ಬಂಗಾರಪೇಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net