

ಗುಬ್ಬಿ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತವರು ಜಿಲ್ಲೆ ತುಮಕೂರಿನ ಕೆಲ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕಲಿಕೆಗೆ ಕೊಠಡಿಯೇ ಇಲ್ಲ. ಇದಕ್ಕೆ ನಿದರ್ಶನ ಎಂಬಂತೆ ನಿಟ್ಟೂರು ಹೋಬಳಿ ಇಡಕನಹಳ್ಳಿ ಮಜರೆ ಕಾಡೇಗೌಡನಹಟ್ಟಿ ಶಾಲೆಯ ಮಕ್ಕಳು ಟೆಂಟ್‌ನಲ್ಲಿ ಪಾಠ ಕಲಿಯುತ್ತಿರುವುದು ಇಡೀ ಆಡಳಿತ ವ್ಯವಸ್ಥೆಯೇ ತಲೆತಗ್ಗಿಸುವಂತಿದೆ.
ಕಾಡೇಗೌಡನಹಟ್ಟಿ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡ ಸಂಪೂರ್ಣ ಹಾಳಾಗಿದ್ದು, ಛಾವಣಿ ಬೀಳುತ್ತಿದೆ, ಅಪಾಯಕ್ಕೆ ಅವಕಾಶವಿಲ್ಲದಂತೆ ತಾತ್ಕಾಲಿಕ ಟೆಂಟ್ ನಿರ್ಮಿಸಿಕೊಂಡು ಮಕ್ಕಳಿಗೆ ಪಾಠ ಹೇಳಿಕೊಡಲಾಗುತ್ತಿದೆ.
ಸರ್ಕಾರಿ ಶಾಲೆ ಕಟ್ಟಡದ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಸ್ಥಳೀಯರು ವರ್ಷದಿಂದ ಮಾಡಿಕೊಂಡ ಮನವಿಗೆ ಯಾರೊಬ್ಬರೂ ತಲೆಕೆಡಿಸಿಕೊಂಡಿಲ್ಲ. ಗ್ರಾಮೀಣ ಭಾಗದ ಮಕ್ಕಳು ಕನಿಷ್ಠ ಮೂಲಸೌಕರ್ಯವಿಲ್ಲದ ಶಾಲೆಯಲ್ಲಿ ಕಲಿಯುವಂತಾಗಿದೆ.
90 ಮನೆಗಳಿರುವ ಗ್ರಾಮದಲ್ಲಿ 1 ರಿಂದ 5ನೇ ತರಗತಿಯವರೆಗೆ 27 ಮಕ್ಕಳು ಕಲಿಯುತ್ತಿದ್ದು, ಮೂರು, ನಾಲ್ಕು ಹಾಗೂ 5ನೇ ತರಗತಿಯ ಮಕ್ಕಳಿಗೆ ಗ್ರಾಮಸ್ಥರೇ ಶೆಡ್ ನಿರ್ಮಿಸಿಕೊಟ್ಟಿದ್ದಾರೆ. ಮಳೆ ಬಂದಾಗ ಈ ತಾತ್ಕಾಲಿಕ ಶೆಡ್‌ನಲ್ಲಿಯೂ ಕಲಿಕೆ ಕಷ್ಟವಾಗಿದ್ದು ಬಡ ಮಕ್ಕಳಿಗೆ ವಿದ್ಯೆ ನೈವೇದ್ಯವಾಗಿದೆ.
ಸುಸಜ್ಜಿತ ಆಟದ ಮೈದಾನ, ಶೌಚಗೃಹ ಸೇರಿ ಎಲ್ಲ ಪೂರಕ ವಾತಾವರಣವಿರುವ ಶಾಲೆ 1984ರಲ್ಲಿ ಆರಂಭವಾಗಿದ್ದು, ಆಗ ನಿರ್ಮಿಸಿದ್ದ 2 ಕೊಠಡಿಗಳಲ್ಲಿ ಒಂದು ಉಳಿದಿದೆ.
ಇರುವ ಒಂದು ಕೊಠಡಿಯಲ್ಲಿ ಕಚೇರಿ, ಪೀಠೋಪಕರಣ, ಒಂದು ಮತ್ತು 2ನೇ ತರಗತಿಗೆ ಪಾಠ ಕಲಿಸುವ ದುಸ್ಥಿತಿಯಿದೆ. ಶಾಲೆಯಲ್ಲಿ ಇಬ್ಬರು ಶಿಕ್ಷಕರಿದ್ದು ಕೊಠಡಿಯಿಲ್ಲದೆ ಪಾಠ ಮಾಡಲು ಸಾಧ್ಯವಾಗುತ್ತಿಲ್ಲ. ಶಾಲೆಯಲ್ಲಿರುವ ಒಂದು ಕೊಠಡಿ ಕೂಡ ಇತ್ತೀಚೆಗೆ ಸುರಿಯುತ್ತಿರುವ ಮಳೆಗೆ ಹಾಳಾಗಿದ್ದು ಬೀದಿಯಲ್ಲಿ ಮಕ್ಕಳಿಗೆ ಕಲಿಸುವ ಅನಿವಾರ್ಯತೆ ಎದುರಾಗಿದೆ. ದಿನವಿಡೀ ಗುಡಿಸಲಿನಲ್ಲಿಯೇ ಪಾಠ ಕಲಿಯುವ ಅನಿವಾರ್ಯತೆಯಿದ್ದು ಮಳೆ ಬಂದಾಗ ಯಾರಿಗೂ ಪಾಠವಿಲ್ಲ. ಸರ್ಕಾರಿ ಶಾಲೆ ಉಳಿಸುವ ನಿಟ್ಟಿನಲ್ಲಿ ಗ್ರಾಮಸ್ಥರು ಪ್ರಾಯಾಸಪಡುತ್ತಿದ್ದರೆ ಶಿಕ್ಷಣ ಇಲಾಖೆ ಅಧಿಕಾರಿಗಳು ಜಾಣಮೌನದಲ್ಲಿದ್ದಾರೆ.
ಕಾಡೇಗೌಡನಹಟ್ಟಿ ಶಾಲಾ ಕಟ್ಟಡ ಇಲ್ಲದಿರುವ ಬಗ್ಗೆ ಇಲಾಖೆ ಗಮನಕ್ಕೆ ಬಂದಿದೆ, ತಾಲೂಕಿನಲ್ಲಿ 170 ಸರ್ಕಾರಿ ಶಾಲಾ ಕೊಠಡಿ ದುರಸ್ತಿಯಾಗಬೇಕಿದೆ. ಶಾಲೆ ನಡೆಸಲು ಬೇರೆ ಯಾವುದೇ ಕಟ್ಟಡ ಲಭ್ಯವಿಲ್ಲದ ಕಾರಣ ಗ್ರಾಮಸ್ಥರೇ ಟೆಂಟ್ ನಿರ್ಮಿಸಿಕೊಟ್ಟಿದ್ದಾರೆ.
-ಸೋಮಶೇಖರ್ ಬಿಇಒ, ಗುಬ್ಬಿ ತಾಲೂಕು
ಶಾಲೆ ಉಳಿಸಬೇಕು ಎಂಬ ಕಾರಣಕ್ಕೆ ಗ್ರಾಮಸ್ಥರೇ ಶೆಡ್ ನಿರ್ಮಿಸಿಕೊಟ್ಟಿದ್ದೇವೆ. ಆದರೆ, ಮಳೆ ಬಂದಾಗ ಪಾಠ ಕಲಿಕೆ ಅಸಾಧ್ಯ. ಬಡ ಮಕ್ಕಳೇ ಓದುವ ಶಾಲೆಗೆ ಕೊಠಡಿಗಾಗಿ ಸಾಕಷ್ಟು ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ.
- ಗುರುಚಿಕ್ಕೇಗೌಡ ಎಸ್‌ಡಿಎಂಸಿ ಅಧ್ಯಕ್ಷ