ದೀಪಾವಳಿಗೆ ಬನ್ನೇರುಘಟ್ಟದಲ್ಲಿ ಚಿರತೆ ಸಫಾರಿ ಆರಂಭ

bannerughatta
Published on

ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ದೀಪಾವಳಿ ವೇಳೆಗೆ ಚಿರತೆ ಸಫಾರಿ ಆರಂಭವಾಗಲಿದೆ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ತಿಳಿಸಿದ್ದಾರೆ.

ಉದ್ಯಾನಕ್ಕೆ ಗುರುವಾರ ಭೇಟಿ ನೀಡಿ ಮಾತನಾಡಿದರು. ಉದ್ಯಾನದ 12 ಹೆಕ್ಟೇರ್​ನ ಮೃಗಾಲಯದಲ್ಲಿ ನಾಗರಹಾವು, ಚಿರತೆ, ಮೊಸಳೆ, ಕರಡಿ, ಜಿಂಕೆ ಸೇರಿ ಹಲವು ಪ್ರಾಣಿ-ಪಕ್ಷಿಗಳಿವೆ. ಸಿಂಹದ ಸಫಾರಿ, ಕರಡಿ ಸಫಾರಿ ಹಾಗೂ ಹುಲಿ ಸಫಾರಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಈಗ ಹೊಸದಾಗಿ 2 ಕೋಟಿ ರೂ. ಅನುದಾನದಲ್ಲಿ ಚಿರತೆ ಸಫಾರಿ ಆರಂಭಿಸುವ ಕಾರ್ಯ ಅಂತಿಮ ಹಂತದಲ್ಲಿದ್ದು, ದೀಪಾವಳಿ ವೇಳೆಗೆ ವೀಕ್ಷಣೆಗೆ ಮುಕ್ತವಾಗಲಿದೆ ಎಂದು ತಿಳಿಸಿದರು.

ಉದ್ಯಾನದ 50 ಎಕರೆ ಪ್ರದೇಶದಲ್ಲಿ ಕಚ್ಛಾ ರಸ್ತೆ, ಕರ್ಪರದ ಮರಗಳನ್ನು ಬೆಳೆಸಿ ಕಾಡಿನ ನೈಜತೆಯೊಂದಿಗೆ ಆರಂಭದಲ್ಲಿ 8 ಚಿರತೆಗಳನ್ನು ಬಿಟ್ಟು ಪ್ರಾಯೋಗಿಕ ಸಫಾರಿ ನಡೆಸಲಾಗುವುದು. ಮತ್ತಷ್ಟು ಅಭಿವೃದ್ಧಿಗೆ 80 ಲಕ್ಷ ರೂ. ಅನುದಾನಕ್ಕಾಗಿ ಪ್ರವಾಸೋದ್ಯಮ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. 7 ಕೋಟಿ ರೂ. ವೆಚ್ಚದಲ್ಲಿ ಪಶು ಆಸ್ಪತ್ರೆ ನಿರ್ವಣಕ್ಕೆ ಪಶುಸಂಗೋಪನೆ ಮತ್ತು ಅರಣ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಉದ್ಯಾನಕ್ಕೆ ಕಾವೇರಿ ನೀರು ಪೂರೈಕೆ ಕಾಮಗಾರಿಯೂ ಶೀಘ್ರದಲ್ಲೇ ಪೂರ್ಣವಾಗಲಿದೆ ಎಂದರು.

ಪ್ರಾಣಿ ವಿನಿಮಯಕ್ಕೆ ಸೂಚನೆ: ಉದ್ಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರಾಣಿಗಳನ್ನು ಬೇರೆ ಮೃಗಾಲಯಗಳಿಗೆ ಕಳುಹಿಸುವುದು ಹಾಗೂ ಹೊಸ ಪ್ರಾಣಿಗಳನ್ನು ಕರೆತರಲು ಪ್ರಾಣಿ ವಿನಿಮಿಯ ಯೋಜನೆಯಡಿ ಕ್ರಮ ವಹಿಸುವಂತೆ ಸೂಚಿಸಲಾಗಿದೆ. ಆನೆಗಳ ಮಾವುತರು ಹಾಗೂ ಪ್ರಾಣಿಪಾಲಕರ ಕುಟುಂಬದವರನ್ನು ಭೇಟಿ ಮಾಡಿ ಕುಂದು-ಕೊರತೆ ಆಲಿಸಿದ್ದೇವೆ. ಉದ್ಯಾನದ ಪ್ರವೇಶ ದ್ವಾರದ ಬಳಿ ಶಾಪಿಂಗ್ ಪ್ಲಾಜಾ ನಿರ್ವಿುಸುವ ಬಗ್ಗೆ ಸಾಧಕ-ಬಾಧಕ ಪರಿಶೀಲಿಸಲು ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net