

ಚಿಕ್ಕಮಗಳೂರು: ಬೇಲಿಯಲ್ಲಿ ಹಾಕಿದ್ದ ಉರುಳಿಗೆ ಸಿಲುಕಿಕೊಂಡು ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದ ಚಿರತೆಯನ್ನು ಅರಣ್ಯ ಇಲಾಖೆ ಹಾಗೂ ಅರವಳಿಕೆ ವೈದ್ಯರು ರಕ್ಷಿಸಿದ್ದಾರೆ.
ತಾಲೂಕಿನ ಮುಕ್ತಿಹಳ್ಳಿ ಸಮೀಪ ಕೆಸವಿನ ಮನೆ ತೋಟದ ಬೇಲಿಯಲ್ಲಿ ಹಾಕಿದ್ದ ಉರುಳಿಗೆ ಚಿರತೆ ಗುರುವಾರ ರಾತ್ರಿ ಸಿಲುಕಿಕೊಂಡಿದೆ. ಶುಕ್ರವಾರ ಬೆಳಗ್ಗೆ ರಸ್ತೆಯಲ್ಲಿ ತಿರುಗಾಡುವವರು ನೋಡಿ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕೆ ಬೆಳಗ್ಗೆ 6 ಗಂಟೆಗೆ ಧಾವಿಸಿದ ಅಧಿಕಾರಿಗಳು ರಸ್ತೆಯಲ್ಲಿ ಜನ ಸಂಚಾರ ನಿರ್ಬಂಧಿಸಿದರು. ಜಿಲ್ಲೆಯಲ್ಲಿ ಯಾರೂ ಅರವಳಿಕೆ ತಜ್ಞರು ಇಲ್ಲದಿದ್ದರಿಂದ ಚಿರತೆ ರಕ್ಷಣೆ ಮಾಡಲು ವಿಳಂಬವಾಯಿತು.
ಶಿವಮೊಗ್ಗ ಸಮೀಪದ ತಾವರೆಕೊಪ್ಪ ಸಿಂಹಧಾಮ ವೈದ್ಯ ಡಾ. ಮುರಳಿ ಮನೋಹರ್ ಮತ್ತು ತಂಡದವರು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಬೆಳಗ್ಗೆ 11.30 ಆಗಿತ್ತು. ಡಾ. ಮುರಳಿ ಮನೋಹರ್ ಅರವಳಿಕೆ ಚುಚ್ಚುಮದ್ದು ನೀಡಿದರು. ಮೊದಲು ನೀಡಿದ ಚುಚ್ಚು ಮದ್ದಿಗೆ ಚಿರತೆಯ ಪ್ರಜ್ಞೆ ತಪ್ಪಲಿಲ್ಲ. ಎರಡನೇ ಬಾರಿ ನೀಡಿದ ಚುಚ್ಚು ಮದ್ದಿನಿಂದ ಮಂಕಾಯಿತು. ಸಂಪೂರ್ಣವಾಗಿ ಪ್ರಜ್ಞೆ ತಪ್ಪಲು ಮೂರನೇ ಚುಚ್ಚುಮದ್ದು ನೀಡಿದರು. ಪ್ರಜ್ಞೆ ತಪ್ಪುತ್ತಿದ್ದಂತೆ ತಂತಿಬೇಲಿಯನ್ನು ಕತ್ತರಿಸಿದರು. ಅರಣ್ಯ ಸಿಬ್ಬಂದಿ ಚಿರತೆಯನ್ನು ಬೋನಿನಲ್ಲಿ ಇರಿಸಿ ಗಾಲ್ಫ್ ಸಮೀಪದ ಅರಣ್ಯ ಇಲಾಖೆ ಕಚೇರಿಗೆ ಸಾಗಿಸಿದರು.
ಚಿರತೆಗೆ ಸಣ್ಣಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ನೀಡಲಾಗಿದೆ. ಚಿರತೆ ಆರೋಗ್ಯವಾಗಿದ್ದು ಗಾಲ್ಫ್ ಸಮೀಪದ ಅರಣ್ಯ ಇಲಾಖೆ ಆವರಣದಲ್ಲಿ ಇರಿಸಿ ನಿಗಾವಹಿಸಲಾಗಿದೆ. ಸಂಪೂರ್ಣವಾಗಿ ಚೇತರಿಸಿಕೊಂಡ ನಂತರ ರಾಜ್ಯ ಪಿಸಿಎಫ್ ಅಧಿಕಾರಿಗಳ ಅನುಮತಿ ಪಡೆದು ಸುರಕ್ಷಿತವಾಗಿ ಬಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ವಿ.ಎಸ್.ಮೋಹನ್, ಉಪ ಅರಣ್ಯಾಧಿಕಾರಿ ಕೆ.ಕೆ.ರಮೇಶ್, ಸಿಬ್ಬಂದಿ ಸತೀಶ್, ಮಧುಸೂದನ್, ರಾಧಮ್ಮ, ಪುರುಷೋತ್ತಮ್, ಶಿವರಾಜ್, ಪರಿಸರವಾದಿಗಳಾದ ವೀರೇಶ್, ಬಿ.ವಿ.ಗಿರೀಶ್ ಇತರರಿದ್ದರು.