

ಪಡುಬಿದ್ರಿ ಪಡುಬಿದ್ರಿಯ ಎಲ್ಲೂರು ಗ್ರಾಮದ ಮಾಣಿಯೂರಿನಲ್ಲಿ ಗುರುವಾರ ರಾತ್ರಿ ಮನೆಯಂಗಳಕ್ಕೆ ಬಂದ ಚಿರತೆ, ಸಾಕುನಾಯಿಯನ್ನು ಹೊತ್ತೊಯ್ದಿದೆ. ಮಾಣಿಯೂರಿನ ಮುರಳಿ ಶೆಟ್ಟಿ ಎಂಬುವರ ಮನೆ ನಾಯಿ ಜೋರಾಗಿ ಬೊಗಳಿದ್ದು, ಮನೆಮಂದಿ ಹೊರಬಂದು ನೋಡಿದಾಗ ಯಾರೂ ಇರಲಿಲ್ಲ. ಮತ್ತೊಮ್ಮೆ ನಾಯಿ ಬೊಗಳಲಾರಂಭಿಸಿದ್ದು, ಏಕಾಏಕಿ ನಿಲ್ಲಿಸಿತು. ಸಿಸಿಟಿವಿ ಪರಿಶೀಲಿಸಿದಾಗ, ಅಂಗಳಕ್ಕೆ ಬಂದ ಚಿರತೆ ನಾಯಿಯನ್ನು ಹೊತ್ತೊಯ್ಯುವ ದೃಶ್ಯ ಕಂಡುಬಂತು. ವಾರದ ಹಿಂದೆ, ಶಿರ್ವ ಪರಿಸರದಲ್ಲಿ ಚಿರತೆ ಕಾಣಿಸಿಕೊಂಡಿದ್ದು, 10 ದಿನಗಳ ಹಿಂದೆ ಮುದರಂಗಡಿ ಗ್ರಾಮದ ಸಾಂತೂರಿನಲ್ಲಿ ಮನೆ ಬಾವಿಗೆ ಬಿದ್ದ ಚಿರತೆಯನ್ನು ಅರಣ್ಯ ಇಲಾಖೆ ರಕ್ಷಿಸಿ ಕಾಡಿಗೆ ಬಿಟ್ಟಿತ್ತು. ಸುತ್ತಮುತ್ತಲ ಗ್ರಾಮದವರು ಆತಂಕಗೊಂಡಿದ್ದಾರೆ.
ಕಾಸರಗೋಡು ಜಿಲ್ಲೆಯ ಬೋವಿಕ್ಕಾನ ಸನಿಹದ ಇರಿಯಣ್ಣಿಯಲ್ಲಿ ಶುಕ್ರವಾರ ಚಿರತೆ ಕಾಣಸಿಕ್ಕಿದೆ. ಆಯುರ್ವೇದ ಆಸ್ಪತ್ರೆ ಬಳಿಯ ಮರದಿಂದ ಚಿರತೆ ಕೆಳಕ್ಕೆ ಜಿಗಿದಿದೆ. ಇದನ್ನು ಕಂಡು ಮಹಿಳೆಯೊಬ್ಬರು ಬೊಬ್ಬಿಡುತ್ತಿದ್ದಂತೆ ಕುಟ್ಟಿಯಡ್ಕ ಕಡೆಗೆ ಚಿರತೆ ಪರಾರಿಯಾಗಿದೆ ಎಂದು ಆಕೆ ತಿಳಿಸಿದ್ದಾರೆ. ಮುಳಿಯಾರು ಮೀಸಲು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡು ಇರಿಯಣ್ಣಿ ಪೇಟೆಯಿದ್ದು, ಆಸುಪಾಸು ಹಲವು ಕುಟುಂಬಗಳು ವಾಸಿಸುತ್ತಿದೆ. ಹಗಲು ಹೊತ್ತಲ್ಲೇ ಚಿರತೆ ಕಂಡುಬಂದಿರುವುದು ಸ್ಥಳೀಯರ ಆತಂಕ ಹೆಚ್ಚಿಸಿದೆ. ಒಂದು ವಾರದ ಅವಧಿಯಲ್ಲಿ ಇರಿಯಣ್ಣಿ ಆಸುಪಾಸಿನ ಪ್ರದೇಶದಲ್ಲಿ ಐದಕ್ಕೂ ಹೆಚ್ಚು ಬಾರಿ ಚಿರತೆ ಕಾಣಿಸಿಕೊಂಡಿದೆ.