ಜಾಗಟೆ ಮಲ್ಲೇನಹಳ್ಳಿಯಲ್ಲಿ ಬೋನಿಗೆ ಸೆರೆಸಿಕ್ಕ ಚಿರತೆ

4-pnp 2
ಪಾಂಡವಪುರ ತಾಲೂಕಿನ ಜಾಗಟೆಮಲ್ಲೇನಹಳ್ಳಿ ಗ್ರಾಮದ ಹೊರವಲಯದ ಜಮೀನಿನಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ನಾಲ್ಕು ವರ್ಷದ ಚಿರತೆ ಸಿಕ್ಕಿ ಬಿದ್ದಿರುವುದು.
Published on

ಪಾಂಡವಪುರ: ತಾಲೂಕಿನ ಜಾಗಟೆ ಮಲ್ಲೇನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಯೋಗೇಶ್ ಎಂಬುವರ ಜಮೀನಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಇರಿಸಿದ್ದ ಬೋನಿಗೆ ನಾಲ್ಕು ವರ್ಷದ ಗಂಡು ಚಿರತೆ ಮಂಗಳವಾರ ರಾತ್ರಿ ಸೆರೆ ಸಿಕ್ಕಿದೆ.

ರೈತ ಯೋಗೇಶ್ ಅವರ ಜಮೀನಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿರತೆ ಆಗಾಗ್ಗೆ ಕಾಣಿಸಿಕೊಂಡು ಜನರಲ್ಲಿ ಆತಂಕ ಸೃಷ್ಟಿಸಿತ್ತು. ಜತೆಗೆ ಮೇವಿಗೆ ಬಿಡುತ್ತಿದ್ದ ಕುರಿ, ಮೇಕೆಗಳನ್ನು ಸಹ ಎಳೆದೊಯ್ಯುತ್ತಿದ್ದ ಹಿನ್ನೆಲೆಯಲ್ಲಿ ರೈತರು ಅರಣ್ಯಾಧಿಕಾರಿಗಳಿಗೆ ದೂರು ನೀಡಿ ಚಿರತೆ ಸೆರೆಗೆ ಕ್ರಮ ವಹಿಸುವಂತೆ ಒತ್ತಾಯಿಸಿದ್ದರು. ದೂರಿನ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಚಿರತೆಯ ಹೆಜ್ಜೆ ಗುರುತುಗಳು ಕಂಡುಬಂದಿತ್ತು. ಅದನ್ನು ಆಧರಿಸಿ ಕಳೆದ ನಾಲ್ಕು ದಿನಗಳ ಹಿಂದೆ ಬೋನಿನಲ್ಲಿ ನಾಯಿ ಇರಿಸಿ ಚಿರತೆ ಸೆರೆಗೆ ಕ್ರಮ ಕೈಗೊಳ್ಳಲಾಗಿತ್ತು. ಬುಧವಾರ ಬೆಳಗ್ಗೆ ರೈತ ಯೋಗೇಶ್ ಎಂದಿನಂತೆ ಜಮೀನಿಗೆ ತೆರಳಿದ ವೇಳೆ ಚಿರತೆ ಬೋನಿಗೆ ಬಿದ್ದಿರುವ ವಿಚಾರ ತಿಳಿದುಬಂದಿದೆ. ತಕ್ಷಣ ರೈತರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿ ಚಿರತೆಯನ್ನು ವಶಕ್ಕೆ ಪಡೆದಿದ್ದಾರೆ.

ಜಾಗಟೆಮಲ್ಲೇನಹಳ್ಳಿ ಗ್ರಾಮದ ಹೊರವಲಯದಲ್ಲಿ ಬೋನಿಗೆ ಬಿದ್ದಿರುವ 4 ವರ್ಷದ ಚಿರತೆಯನ್ನು ವೈದ್ಯಕೀಯ ಪರೀಕ್ಷೆ ನಡೆಸಿ, ಮೇಲಧಿಕಾರಿಗಳ ಸೂಚನೆಯಂತೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಜಗದೀಶ್‌ಗೌಡ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net