

ಅರಸೀಕೆರೆ: ತಾಲೂಕಿನ ಸಂಕೋಡನಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಂತಿರುವ ಚಿಕ್ಕಬೆಟ್ಟದ ಸರಹದ್ದಿನಲ್ಲಿ ಮೇಕೆ ಮೇಯಿಸಲು ಹೋಗಿದ್ದ ಮಹಿಳೆಯನ್ನು ಚಿರತೆ ಕಚ್ಚಿ ಗಾಯಗೊಳಿಸಿದೆ.
ಸಂಕೋಡನಹಳ್ಳಿ ಗ್ರಾಮದ ಕೃಷ್ಣಮೂರ್ತಿ ಅವರ ಪತ್ನಿ ಮಂಜುಳಾ ಗಾಯಗೊಂಡವರು. ತಲೆ, ಮುಂಗೈ ಹಾಗೂ ಮುಖದ ಮೇಲೆ ಉಗುರುಗಳಿಂದ ಪರಚಿದ ಗಂಭೀರ ಗಾಯಗಳಾಗಿದ್ದು ನಗರದ ಸರ್ಕಾರಿ ಜೆ.ಸಿ.ಆಸ್ಪತ್ರೆಗೆ ದಾಖಲಿಸಿದ್ದು ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶನಿವಾರ ಎಂದಿನಂತೆ ಮೇಕೆ ಮೇಯಿಸಲು ತೆರಳಿದ್ದ ವೇಳೆ ಚಿರತೆ ದಿಢೀರ್ ದಾಳಿ ಮಾಡಿದೆ. ಮಹಿಳೆಯ ಚೀರಾಟಕ್ಕೆ ಬೆದರಿದ ಚಿರತೆ ಅಲ್ಲಿಂದ ಕಾಲ್ಕಿತ್ತಿದೆ. ಸುದ್ದಿ ತಿಳಿದ ತಕ್ಷಣವೇ ಸ್ಥಳೀಯರು ದೌಡಾಯಿಸಿ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಗಾಯಾಳುವನ್ನು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಕಳೆದ ಕೆಲ ದಿನಗಳ ಹಿಂದಷ್ಟೇ ಹಂದಿಮರಟಿ ಸರಹದ್ದಿನಲ್ಲಿ ಚಿರತೆ ಬೋನಿಗೆ ಬಿದ್ದಿತ್ತು. ಗ್ರಾಮದ ಆಸುಪಾಸಿನಲ್ಲಿರುವ ಗುಡ್ಡದ ಆಯಕಟ್ಟಿನ ಜಾಗಗಳಲ್ಲಿ ಇನ್ನೂ ಮೂರ‌್ನಾಲ್ಕು ಚಿರತೆಗಳಿದ್ದು ಸೆರೆಹಿಡಿಯುವ ಕಾರ್ಯಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣವೇ ಮುಂದಾಗಬೇಕು. ಜತೆಗೆ ಗಾಯಾಳುವಿನ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ತಾಲೂಕು ಹಾಗೂ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.