ಚಿರತೆ ದಾಳಿಗೆ ಬಲಿಯಾಗಿದ್ದ ಕರು ಶವವನ್ನು ಪತ್ತೆಹಚ್ಚಿದ ತಾಯಿಹಸು: ಮಳವಳ್ಳಿಯಲ್ಲಿ ಮನಕಲಕುವ ಘಟನೆ

cow cheetha
Published on

ಹಲಗೂರು(ಮಂಡ್ಯ): ಚಿರತೆ ದಾಳಿಗೆ ಬಲಿಯಾಗಿದ್ದ ಕರುವನ್ನು ತಾಯಿಹಸು ಪತ್ತೆಹಚ್ಚಿದ್ದು, ಕರುವಿನ ಶವದ ಬಳಿ ತಾಯಿಯ ಮೂಕರೋಧನೆ ನೋಡಿ ಸ್ಥಳೀಯರು ಮಮ್ಮಲಮರಗಿದ್ದಾರೆ.

ಇಂತಹ ಮನಕಲಕುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹಲಗೂರು ಗ್ರಾಮದಲ್ಲಿ ಗುರುವಾರ ಬೆಳಗ್ಗೆ ಸಂಭವಿಸಿದೆ. ಕೊನ್ನಾಪುರ ಚಂದ್ರಶೇಖರ್ ಅವರು ಮನೆಯ ಹಿತ್ತಲಿನ ಕೊಟ್ಟಿಗೆಯಲ್ಲಿ ಬುಧವಾರ ರಾತ್ರಿ ಹಸು ಕರು ಕಟ್ಟಿದ್ದರು. ಎಂದಿನಂತೆ ಬೆಳಗ್ಗೆ ಎದ್ದು ಕೊಟ್ಟಿಗೆಗೆ ಹೋದಾಗ ಕರು ಇರಲಿಲ್ಲ. ಮನೆಯ ಸುತ್ತಾಮುತ್ತ ಹುಡುಕಾಡಿದರೂ ಕರು ಪತ್ತೆಯಾಗಲಿಲ್ಲ. ಕೊನೆಗೆ ತಾಯಿಹಸುವಿನ ಹಗ್ಗ ಬಿಚ್ಚಿದ್ದಾರೆ.

ಕರುವಿಗಾಗಿ ಹುಡುಕುತ್ತಾ ಓಡಿದ ತಾಯಿಹಸು, ಕೊಟ್ಟಿಗೆಯಿಂದ ಅರ್ಧ ಕಿಲೋ ಮೀಟರ್​ ದೂರದ ಗದ್ದೆ ಬಯಲಿನತ್ತ ಸಾಗಿದ ತಾಯಿಹಸು ಅಲ್ಲೇ ರೋಧಿಸುತ್ತಾ ನಿಂತಿತ್ತು. ಹಸುವನ್ನೇ ಹಿಂಬಾಲಿಸಿಕೊಂಡು ಬಂದ ರೈತ ಚಂದ್ರಶೇಖರ್, ಅಲ್ಲಿ ಕರುವಿನ ಮೃತದೇಹ ಕಂಡು ದುಃಖಿಸಿದ್ದಾರೆ. ಗುರುವಾರ ರಾತ್ರಿ ಚಿರತೆಯು ಕರುವನ್ನ ಹೊತ್ತೊಯ್ದು ಕೊಂದುಹಾಕಿರುವುದು ಗೊತ್ತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net