

ಮೈಸೂರು: ಗ್ರಾಮೀಣ ಸೊಗಡಿನ ಕಲಿಕಾ ಹಬ್ಬವು ಪ್ರತಿ ಮಕ್ಕಳ ಪ್ರತಿಭೆಯನ್ನು ಹೊರತರಲು ವೇದಿಕೆಯಾಗಿದೆ ಎಂದು ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಹೇಳಿದರು.
ಶಿಕ್ಷಣ ಇಲಾಖೆ ವತಿಯಿಂದ ಆಲನಹಳ್ಳಿ ಕ್ಲಸ್ಟರ್‌ನ ಲಲಿತಾದ್ರಿಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ಯ ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿ ಕಲಿಕಾ ಹಬ್ಬ ಪ್ರಾರಂಭಿಸಿದೆ. ಕೋವಿಡ್ ಕಾರಣದಿಂದಾಗಿ ಎರಡು ವರ್ಷಗಳಿಂದ ಶಾಲೆಯ ಆಟೋಟಗಳು ಹಾಗೂ ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ನಿಂತು ಹೋಗಿದ್ದವು. ಈ ಬಾರಿ ರಾಜ್ಯ ಸರ್ಕಾರವು ಕಲಿಕಾ ಹಬ್ಬ ಎಂಬ ಒಂದು ಶೀರ್ಷಿಕೆ ಅಡಿಯಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಹಬ್ಬದ ಸೊಗಡನ್ನು ಉಣಬಡಿಸುತ್ತಿದೆ ಎಂದರು.
ಡಯಟ್ ಪ್ರಾಂಶುಪಾಲ ನಾಗರಾಜಯ್ಯ ಮಾತನಾಡಿದರು. ಎಡಿಪಿಐ ಮಲ್ಲಿಕಾರ್ಜುನಯ್ಯ, ಪಿಡಿಒ ರವಿ, ಎಸ್‌ಡಿಎಂಸಿ ಅಧ್ಯಕ್ಷ ನಾಗೇಂದ್ರ, ಗ್ರಾಮದ ಮುಖಂಡರಾದ ಪಟೇಲ್ ಗಂಗಾಧರ್, ನಾಡಗೌಡ್ರು ತಮ್ಮಯ್ಯಪ್ಪ, ಮಾದಪ್ಪ, ಶಿಲ್ಪಿಸಿದ್ದಾಚಾರಿ, ಮಧ್ವಾಚಾರಿ ಇತರರಿದ್ದರು.