

ಹಿರಿಕರ ರವಿ ಸೋಮವಾರಪೇಟೆ
ಪಟ್ಟಣದ ಹೃದಯ ಭಾಗದಲ್ಲಿರುವ 90 ವರ್ಷಗಳ ಇತಿಹಾಸವಿರುವ ವಿದ್ಯಾಗಣಪತಿ ನಂಬಿದವರ ಕೈಹಿಡಿಯುವ ದೈವ ಎಂಬ ನಂಬಿಕೆ ಭಕ್ತ ವಲಯದಲ್ಲಿದೆ.
ವಿಘ್ನವಿನಾಶಕ ವಿದ್ಯಾಗಣಪತಿಯ ಆಶೀರ್ವಾದವಿದ್ದರೆ ಮಕ್ಕಳು ವಿದ್ಯೆ ಕಲಿತು ದೊಡ್ಡ ಸ್ಥಾನಕ್ಕೆ ಹೋಗುತ್ತಾರೆ ಎಂಬ ನಂಬಿಕೆ ಭಕ್ತರಲ್ಲಿದೆ. ಮಕ್ಕಳಲ್ಲಿ ಜನನ ದೋಷವಿದ್ದರೆ, ಪೂಜೆ ಮಾಡಿಸಿದ ನಂತರ ಪರಿಹಾರವಾಗುತ್ತದೆ. ಗ್ರಹಚಾರ ದೋಷದಿಂದ ಮುಕ್ತರಾಗಬಹುದು ಎಂಬ ನಂಬಿಕೆಯೂ ಇದೆ.
ಕೃಷಿ ಭೂಮಿಯಲ್ಲಿ ಕಾಡಾನೆಗಳ ಕಾಟದಿಂದ ಕೃಷಿ ಫಸಲು ಹಾನಿಯಾಗುತ್ತಿದ್ದರೆ, ಕೃಷಿಕರು ಬಂದು ವಿದ್ಯಾಗಣಪತಿಗೆ ಪೂಜೆ ಸಲ್ಲಿಸಿ ಹರಕೆ ಮಾಡಿಕೊಳ್ಳುತ್ತಾರೆ. ಕೃಷಿ ಫಸಲು ಕೈ ಸೇರಿದರೆ, ವಾರ್ಷಿಕವಾಗಿ ವಿಶೇಷ ಪೂಜೆ ಮಾಡಿಸುತ್ತಾರೆ. ಮನೆಗಳಲ್ಲಿ ಇಲಿ ಕಾಟ ಹೆಚ್ಚಾದರೂ ಅನೇಕ ಮಂದಿ ಗಣಪತಿಯ ಮೊರೆ ಹೋಗುವ ನಿದರ್ಶನಗಳ ಬಗ್ಗೆ ಪೂಜಾರಿ ಹೇಳುತ್ತಾರೆ.
ಮನೆಯಲ್ಲಿ ಶುಭ ಕಾರ್ಯ ನಡೆಯಬೇಕಾದರೂ ಮೊದಲ ಗಣಪತಿಗೆ ಪೂಜೆ ಮಾಡಿಸುತ್ತಾರೆ. ಮಕ್ಕಳ ಮದುವೆ, ಸೈಟ್ ಖರೀದಿ, ಮನೆಕಟ್ಟುವುದು ಎಲ್ಲದಕ್ಕೂ ದೇವರ ಅನುಗ್ರಹಕ್ಕಾಗಿ ಬೇಡಿಕೆ ಇಡುತ್ತಾರೆ. ದೇವಾಲಯದಲ್ಲಿ ಲಗ್ನಪತ್ರಿಗೆ ಹಾಗು ಮದುವೆಗಳು ನಡೆದರೆ, ಕುಟುಂಬದಲ್ಲಿ ಸಮೃದ್ಧಿ ಎಂಬ ನಂಬಿಕೆಯೂ ಇದೆ. ಹೊಸ ವಾಹನಗಳನ್ನು ಖರೀದಿಸಿದರೆ ಮೊದಲು ಗಣಪತಿ ದೇವಾಲಯದಲ್ಲಿ ಪೂಜೆ ಮಾಡಿಸುತ್ತಾರೆ. ಗ್ರಾಮೀಣ ಭಾಗದಿಂದಲೂ ಪೂಜೆ ಮಾಡಿಸಲು ವಾಹನಗಳನ್ನು ತರುತ್ತಾರೆ.
ರಾಜಕಾರಣಿಗಳಿಗೆ ವಿದ್ಯಾಗಣಪತಿ ಬಗ್ಗೆ ವಿಶೇಷ ನಂಬಿಕೆಯಿದೆ. ಗ್ರಾಮ ಪಂಚಾಯಿತಿಯಿಂದ ಹಿಡಿದು ವಿಧಾನಸಭೆ ಚುನಾವಣೆಗೂ ಸ್ಪರ್ಧಿಸುವವರು ವಿದ್ಯಾಗಣಪತಿಗೆ ಪೂಜೆ ಸಲ್ಲಿಸಿಯೇ ನಾಮಪತ್ರ ಸಲ್ಲಿಸುತ್ತಾರೆ. ಚುನಾವಣೆಯಲ್ಲಿ ಗೆದ್ದ ನಂತರ, ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸುತ್ತಾರೆ.
ನವಗ್ರಹಗಳನ್ನು ದೇವಾಲಯದೊಳಗೆ ಪ್ರತಿಷ್ಠಾಪಿಸಲಾಗಿದೆ. ಇಲ್ಲಿ ಮೃತ್ಯುಂಜಯ ಪೂಜೆ, ನವಗ್ರಹ ಪೂಜೆ ನಡೆಯುತ್ತದೆ. ಗೌರಿ-ಗಣೇಶ ಹಬ್ಬ, ಶಿವರಾತ್ರಿ, ಯುಗಾದಿ ಹಬ್ಬದಂದು ವಿಶೇಷ ಪೂಜೆ ನಡೆಯುತ್ತದೆ. ನೂರಾರು ಭಕ್ತರು ಸೇರಿ ಮಳೆ-ಬೆಳೆ, ಸಮೃದ್ಧಿಗಾಗಿ ಸಾಮೂಹಿಕ ಪೂಜೆ ಸಲ್ಲಿಸುತ್ತಾರೆ.
ಪ್ರತಿತಿಂಗಳು ಹುಣ್ಣಿಮೆಯ ನಂತರದ 4ನೇ ದಿನಕ್ಕೆ ಸಂಕಷ್ಟ ಚತುರ್ಥಿ ವಿಶೇಷ ಪೂಜೆ ನಡೆಯುತ್ತದೆ. ವಿದ್ಯಾಗಣಪತಿಗೆ ವಿಶೇಷ ಪೂಜೆ ನಡೆಯುತ್ತದೆ. ಗಣಪತಿಗೆ ವಿವಿಧ ಅಲಂಕಾರಗಳನ್ನು ಮಾಡಲಾಗುತ್ತದೆ. ಹೂವು, ಬೆಣ್ಣೆ, ಆರಿದ್ರಾ, ಅರಿಶಿಣ, ಭಸ್ಮ, ವಿಭೂತಿ, ಗಂಧದ, ನವಿಲುಗರಿ ಅಲಂಕಾರಗಳು ಭಕ್ತರನ್ನು ಆಕರ್ಷಿಸುತ್ತವೆ.