

ಮುಂಡರಗಿ: ಡಿ.ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಭೂ ಸುಧಾರಣೆ ಕಾಯ್ದೆ ಜಾರಿಗೊಳಿಸಿರುವುದು ಐತಿಹಾಸಿಕ ನಿರ್ಣಯವಾಗಿದೆ ಎಂದು ಸಹಾಯಕ ಪ್ರಾಧ್ಯಾಪಕ ಡಾ.ಆರ್.ಎಚ್.ಜಂಗಣವಾರಿ ಹೇಳಿದರು.
ಪಟ್ಟಣದ ಪುರಸಭೆ ಗಾಂಧಿ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಡಿ.ದೇವರಾಜ ಅರಸು ಅವರ 108ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
1976ರಲ್ಲಿ ಬೆಂಗಳೂರು ನಗರವನ್ನು ವಿಜ್ಞಾನ ಮತ್ತು ತಂತ್ರಜ್ಞಾನವನ್ನಾಗಿ ಅಭಿವೃದ್ಧಿ ಪಡಿಸಲು ಸರ್ಕಾರದಿಂದ ಭೂಮಿ ನೀಡಿ ಶಿಲಾನ್ಯಾಸ ನೆರವೇರಿಸಿದರು. 1964ರಲ್ಲಿ ಮಲ ಹೊರುವ ಪದ್ಧತಿಯನ್ನು ರದ್ದು ಪಡಿಸಿದರು. ವೃಕ್ಷ ಅರಣ್ಯ ಯೋಜನೆ ಕಾನೂನು, ವಸತಿ ಹಂಚಿಕೆ ಯೋಜನೆ, ವೃದ್ಯಾಪ್ಯ, ಅಂಗವಿಕಲ ವೇತನ ಯೋಜನೆ ಜಾರಿ ಮಾಡಿದ್ದರು. ಹಿಂದುಳಿದ ವರ್ಗದ ಆಯೋಗ ರಚನೆ ಮಾಡಿದ್ದರು. ಭಾಷಾ ಆಯೋಗ ನೇಮಿಸಿ ಕನ್ನಡವನ್ನು ಆಡಳಿತ ಭಾಷಯನ್ನಾಗಿ ಮಾಡಿದರು ಎಂದರು.
ಅಧ್ಯಕ್ಷತೆ ವಹಿಸಿದ್ದ ತಾ.ಪಂ.ಇಒ ವಿಶ್ವನಾಥ ಹೊಸಮನಿ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಡಿ.ದೇವರಾಜ ಅರಸು ಅವರ ಭಾವಚಿತ್ರ ಮೆರವಣಿಗೆ ಜರುಗಿತು. ಪುರಸಭೆ ಸದಸ್ಯರಾದ ಕವಿತಾ ಉಳ್ಳಾಗಡ್ಡಿ, ಜ್ಯೋತಿ ಹಾನಗಲ್ಲ, ಪ್ರಹ್ಲಾದ ಹೊಸಮನಿ, ಪುರಸಭೆ ಮುಖ್ಯಾಧಿಕಾರಿ ಎಂ.ಎ. ನೂರುಲ್ಲಾಖಾನ್, ಲಕ್ಷ್ಮಣ ತಗಡಿನಮನಿ ಇತರರು ಇದ್ದರು.
ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪಿ.ಎಫ್.ಗುಮ್ಮಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಯೋಗಿ ಕಲ್ಮಠ ನಿರೂಪಿಸಿದರು. ವಿಠ್ಠಲ ನಾವಳ್ಳಿ ವಂದಿಸಿದರು.