ಒಳ್ಳೆಯ ತೀರ್ಪು ಬರಲು ವಕೀಲರ ಪಾತ್ರ ಹಿರಿದು

beelkoduge
ಬಾಗಲಕೋಟೆ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ನ್ಯಾಯವಾದಿಗಳ ಸಂಘದ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡ ಬೀಳ್ಕೊಡುಗೆ ಸಮಾರಂಭದಲ್ಲಿ ಸೇವಾ ನಿವೃತ್ತಿ ಹೊಂದಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಎಸ್.ದೇಶಪಾಂಡೆ ಅವರನ್ನು ಬಾಗಲಕೋಟೆ ನ್ಯಾಯವಾದಿಗಳ ಸಂಘದ ವತಿಯಿಂದ ಸನ್ಮಾನಿಸಲಾಯಿತು. ನ್ಯಾಯಾಧೀಶರಾದ ಜಿ.ಎ.ಮೂಲಿಮನಿ, ಹೇಮಾ ಪಸ್ತಾಪುರ, ಮಹೇಶ ಪಾಟೀಲ, ಮುರುಗೇಂದ್ರ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವಿ.ಪಿ.ಪೂಜಾರ ಇದ್ದರು.
Published on

ಬಾಗಲಕೋಟೆ: ನಿವೃತ್ತಿ ಹೊಂದಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಎಸ್.ದೇಶಪಾಂಡೆ ಅವರಿಗೆ ಬಾಗಲಕೋಟೆ ನ್ಯಾಯವಾದಿಗಳ ಸಂಘದ ವತಿಯಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು.

ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ನ್ಯಾಯವಾದಿಗಳ ಸಂಘದ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿ.ಎಸ್.ದೇಶಪಾಂಡೆ, ಬಾಗಲಕೋಟೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ 2 ವರ್ಷ 2 ತಿಂಗಳು ಸೇವೆ ಸಲ್ಲಿಸಿದ್ದೇನೆ. ನಮ್ಮ ತಂದೆ ಪ್ರಾಥಮಿಕ ಶಾಲೆ ಶಿಕ್ಷಕರಾಗಿದ್ದರು. ಮೂಲತಃ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಮುಗಿಸಿದ್ದು, ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಹೋಗಿರುವುದಾಗಿ ತಿಳಿಸಿದರು.

ಬೆಂಗಳೂರಿನಲ್ಲಿ ಎಲ್‌ಎಲ್‌ಬಿ ವಿದ್ಯಾರ್ಥಿ ಆಗಿರುವಾಗಲೇ ಕೋರ್ಟ್‌ನಲ್ಲಿ ವಕೀಲರು ವಾದ ಮಂಡನೆ ಮಾಡುವುದನ್ನು ಕೇಳುತ್ತಿದ್ದೆ. ನಂತರ ಜ್ಯೂನಿಯರ್ ವಕೀಲನಾಗಿ ಸೇವೆ ಆರಂಭಿಸಿದೆ. ಕೋರ್ಟ್‌ನಲ್ಲಿ ಕೇಸ್‌ಗಳಿಗೆ ಒಳ್ಳೆಯ ತೀರ್ಪು ನೀಡಬೇಕಾದರೆ ವಕೀಲರ ಪಾತ್ರ ಮುಖ್ಯವಾಗಿರುತ್ತದೆ. ಬಾಗಲಕೋಟೆ ಜಿಲ್ಲೆಗೆ ಆಗಮಿಸಿದಾಗ ಎಲ್‌ಐಸಿ ಕೇಸ್‌ಗಳು ಬಹಳಷ್ಟು ಇದ್ದವು. ಅವುಗಳ ವಿಚಾರಣೆ ಕೈಗೊಂಡು ಕಡಿಮೆ ಮಾಡಲಾಗಿದೆ ಎಂದರು.

ನನ್ನ ಅಧಿಕಾರದ ಅವಧಿಯಲ್ಲಿ ಕೋರ್ಟ್ ಕಟ್ಟಡ ವಿಸ್ತರಣೆಗೆ 2.13 ಎಕರೆ ಜಾಗವನ್ನು ಬಿಟಿಡಿಎದಿಂದ ಪಡೆಯಲಾಗಿದೆ. ಕೋರ್ಟ್ ಆವರಣದಲ್ಲಿ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆಯಲಾಗಿದೆ. ಅನುದಾನ ಬರುವದಷ್ಟೇ ಬಾಕಿ ಇದೆ. ಉತ್ತಮವಾಗಿ ಸೇವೆ ಮಾಡಲು ಎಲ್ಲ ವಕೀಲರು ಸಹಕಾರ ನೀಡಿದ್ದು, ಅವರಿಗೆ ಧನ್ಯವಾದ ತಿಳಿಸಿದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಅಧಿಕಾರ ವಹಿಸಿಕೊಂಡ ವಿಜಯ ನೇರಳೆ ಮಾತನಾಡಿ, ಈಗಾಗಲೇ ಮೂರು ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿ ಬಾಗಲಕೋಟೆಗೆ ಬಂದಿದ್ದು, ಹಿಂದೆ ನೀಡಿದ ಸಹಕಾರವನ್ನು ತಮಗೂ ನೀಡಬೇಕು ಎಂದರು.

ಹೆಚ್ಚುವರಿ ಪ್ರಧಾನ ಜಿಲ್ಲಾ ನ್ಯಾಯಾಧೀಶ ಜಿ.ಎ.ಮೂಲಿಮನಿ, 1ನೇ ಹೆಚ್ಚುವರಿ ಹಿರಿಯ ದಿವಾನಿ ನ್ಯಾಯಾಧೀಶೆ ಹೇಮಾ ಪಸ್ತಾಪುರ, 2ನೇ ಹೆಚ್ಚುವರಿ ಹಿರಿಯ ದಿವಾನಿ ನ್ಯಾಯಾಧೀಶ ಮಹೇಶ ಪಾಟೀಲ, ದಿವಾನಿ ನ್ಯಾಯಾಧೀಶ ಮುರುಗೇಂದ್ರ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವಿ.ಪಿ.ಪೂಜಾರ ಇದ್ದರು. ವಕೀಲರ ಸಂಘದ ಕಾರ್ಯದರ್ಶಿ ಹಾವರಗಿ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net