ಪಟ್ಟಣದಲ್ಲಿ ಅದ್ದೂರಿ ಗಣಪತಿ ವಿಸರ್ಜನೆ

27_10_Mdy_02(Ganapathi Visarajane)
Published on

ಪಾಂಡವಪುರ: ಪಟ್ಟಣದ ಹಳೇಬಸ್ ನಿಲ್ದಾಣದಲ್ಲಿ ಶ್ರೀ ಸಿದ್ಧಿ ವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪನೆ ಮಾಡಲಾಗಿದ್ದ ಬೃಹತ್ ಗಣೇಶ, ಗೌರಿ, ಈಶ್ವರ ಹಾಗೂ ಪಾರ್ವತಿ ವಿಗ್ರಹವನ್ನು 45 ದಿನಗಳ ಬಳಿಕ ಅಂದರೆ ಭಾನುವಾರ ವಿವಿಧ ಜಾನಪದ ಕಲಾ ತಂಡ ಅದ್ದೂರಿ ಮೆರವಣಿಗೆಯೊಂದಿಗೆ ಪೊಲೀಸರ ಭದ್ರತೆಯಲ್ಲಿ ವಿಸರ್ಜನೆ ಮಾಡಲಾಯಿತು.

ಪಟ್ಟಣದಲ್ಲಿ ಸಮಿತಿ ವತಿಯಿಂದ 44ನೇ ವರ್ಷದ ಗಣೇಶ ಪ್ರತಿಷ್ಠಾಪನೆ ಮಾಡಿದ್ದರು. ಗಣೇಶ ಪೆಂಡಾಲ್‌ನಲ್ಲಿ 45 ದಿನಕಾಲ ಪ್ರತಿನಿತ್ಯ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಆರೋಗ್ಯ ಶಿಬಿರ, ಹೋಮ ಹಾಗೂ ಅನ್ನದಾಸೋಹ ನಡೆಸಲಾಗಿತ್ತು. ಭಾನುವಾರ ಮಧ್ಯಾಹ್ನ ಹೊರಟ ಮೆರವಣಿಗೆ ಪೇಟೆಬೀದಿ, ಪೊಲೀಸ್ ಠಾಣೆ ರಸ್ತೆ, ಬೀರಶೆಟ್ಟಹಳ್ಳಿ ರಸ್ತೆ, ನಾಗಮಂಗಲ ರಸ್ತೆ, ಮಂಡ್ಯ ಸರ್ಕಲ್, ಐದು ದೀಪದ ವೃತ್ತ, ಹಾರೋಹಳ್ಳಿ ರಸ್ತೆ, ಬಾಲಕಿಯರ ಕಾಲೇಜು ವೃತ್ತದ ಮೂಲಕ ಸಂಚರಿಸಿ ರಾತ್ರಿ ಪೋಸ್ಟ್ ಆಫೀಸ್ ರಸ್ತೆ ಮೂಲಕ ವಿಶ್ವೇಶ್ವರಯ್ಯ ನಾಲೆ ಬಳಿ ಮುಕ್ತಾಯವಾಯಿತು. ನಂತರ ಕ್ರೇನ್ ಮೂಲಕ ಗಣಪತಿ, ಗೌರಿ, ಪಾರ್ವತಿ, ಈಶ್ವರ ಮೂರ್ತಿಗಳನ್ನು ನಾಲೆಗೆ ವಿಸರ್ಜನೆ ಮಾಡಲಾಯಿತು.

ಮೆರವಣಿಗೆಯುದ್ದಕ್ಕೂ ಪೂಜಾ ಕುಣಿತ, ವೀರಗಾಸೆ, ಚಂಡವಾಧ್ಯ, ತಮಟೆ, ವಾಧ್ಯ, ಕಾಳಿನೃತ್ಯಗಳು ಎಲ್ಲರ ಗಮನಸೆಳೆದವು. ಡಿಜೆ ಸೌಂಡ್‌ನಲ್ಲಿ ಹಲವು ಹಾಡುಗಳಿಗೆ ಪುಟ್ಟಪುಟ್ಟ ಮಕ್ಕಳು ಸೇರಿದಂತೆ ಯುವಕ-ಯುವತಿಯರು, ಸಾರ್ವಜನಿಕರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಮೆರವಣಿಗೆಯಲ್ಲಿ ಕೇಸರಿ ಬಾವುಟಗಳು ರಾರಾಜಿಸಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net