

ಆನೇಕಲ್: ಪಟ್ಟಣದಲ್ಲಿ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ 50ನೇ ವಾರ್ಷಿಕೋತ್ಸವ ಪ್ರಯುಕ್ತ ಸೋಮವಾರ ಆನೆ ಅಂಬಾರಿ ಉತ್ಸವ ಸಂಭ್ರಮದಿಂದ ನೆರವೇರಿತು.
ಪಟ್ಟಣದ ಶ್ರೀ ಕೋದಂಡರಾಮಸ್ವಾಮಿ ದೇವಸ್ಥಾನದ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯಿಂದ ಮೂರು ದಿನಗಳಿಂದ ನಿರಂತರವಾಗಿ ಹಮ್ಮಿಕೊಂಡ ವಿಶೇಷ ಪೂಜೆಗಳು ಹಾಗೂ ದಕ್ಷಿಣ ಭಾರತದ ಹೆಸರಾಂತ ಗಾಯಕರದ ಇಸೈತೆಂಡ್ರಲ್ ಕಲೈಮಾಮಣಿ ಶ್ರೀ ವೀರಮಣಿ ರಾಜು ಹಾಗೂ ತಂಡದಿಂದ ಅಯ್ಯಪ್ಪ ಸ್ವಾಮಿ ಭಕ್ತಿ ಗೀತೆ, ಶ್ರೀ ತಿಮ್ಮರಾಯಸ್ವಾಮಿ ತಂಡದಿಂದ ಕೋಲಾಟ ಹಾಗೂ ಆನೇಕಲ್‌ನ ಹೆಸರಾಂತ ದಿವ್ಯ ಸಂಕೀರ್ತನ ಗಾಯಕ ಯತಿರಾಜ್ ರಾಮಾನುಜ್‌ದಾಸ್ ಹಾಗೂ ತಂಡದಿಂದ ಸಂಕೀರ್ತನೆಗಳ ಆಯೋಜನೆ ಭಕ್ತರ ಮನಸೊರೆಗೊಂಡವು. ಶ್ರೀ ಕೋದಂಡರಾಮಸ್ವಾಮಿ ದೇವಾಲಯದಲ್ಲಿ ಆಯೋಜಿಸಿದ್ದ ವಿಶೇಷ ಪೂಜೆ ಹಾಗೂ ಹೋಮ ಹವನಗಳ ಬಳಿಕ ಮಧ್ಯಾಹ್ನ ಶ್ರೀ ಅಯ್ಯಪ್ಪ ಸ್ವಾಮಿಯ ಆನೆ ಅಂಬಾರಿ ಉತ್ಸವ ಶ್ರೀರಾಮ ಲಕ್ಷ್ಮಣ ಸೀತಾಂಜನೇಯರ ಸಮೇತ ವಿಶೇಷ ಪಲ್ಲಕ್ಕಿಯಲ್ಲಿ ಆನೇಕಲ್ ಮುಖ್ಯಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಅಂಬಾರಿ ಹೊತ್ತು ಆನೆ ಸಾಗುತ್ತಿದ್ದ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿತ್ತು. ಉತ್ಸವ ಸಾಗುವ ಪ್ರಮುಖ ಬೀದಿಗಳಲ್ಲಿ ಅಂಬಾರಿಗೆ ಹೂವು ಹಾಕುವ ಮೂಲಕ ಭಕ್ತರು ಭಕ್ತಿ ಮೆರೆದರು. ಅಂಬಾರಿ ಸಾಗುವ ವೇಳೆ ಚಂಡೆ ಮೇಳ ಹಾಗೂ ನಾದಸ್ವರ ಹಾಗೂ ಕೋಲಾಟದ ತಂಡಗಳಿಂದ ಮೆರವಣಿಗಿಗೆ ವಿಶೇಷ ಮೆರಗು ಬಂದಿತು. ಉತ್ಸವವನ್ನು ಸಹಸ್ರಾರು ಭಕ್ತಾದಿಗಳು ಕಣ್ತುಂಬಿಕೊಂಡ ದೃಷ್ಯ ಅಮೋಘವಾಗಿ ಕಂಡುಬಂದಿತು.