

ಸದೇಶ್ ಕಾರ್ಮಾಡ್ ಮೈಸೂರು
ನಗರ ಪಾಲಿಕೆಯು ಕಳೆದ ಎರಡು ಅವಧಿಯಲ್ಲಿ ಅತಿ ಹೆಚ್ಚು ಮಹಿಳಾ ಮೇಯರ್ ಹಾಗೂ ಉಪ ಮೇಯರ್‌ಗಳನ್ನು ಕಂಡಿದ್ದು, ಮುಂದೆ ರಚನೆಯಾಗಲಿರುವ ನೂತನ ಕೌನ್ಸಿಲ್‌ನ ಮೊದಲ ಮೇಯರ್ ಹಾಗೂ ಉಪ ಮೇಯರ್ ಸ್ಥಾನಗಳನ್ನು ಸಹ ಮಹಿಳೆಯರು ಅಲಂಕರಿಸಲಿದ್ದಾರೆ..!
ಪ್ರಸ್ತುತ ನಗರ ಪಾಲಿಕೆಯಲ್ಲಿ ಚುನಾಯಿತ ಜನಪ್ರತಿನಿಧಿಗಳು ಇಲ್ಲ. ಕಳೆದ ಬಾರಿಯ ಕೌನ್ಸಿಲ್ ಅವಧಿಯು 16 ನವೆಂಬರ್ 2023ಕ್ಕೆ ಮುಕ್ತಾಯಗೊಂಡಿತ್ತು. ಅಧಿಕಾರಾವಧಿ ಮುಕ್ತಾಯಗೊಂಡ ತಕ್ಷಣ ಪಾಲಿಕೆಯ 65 ವಾರ್ಡ್‌ಗಳಿಗೆ ಚುನಾವಣೆ ನಡೆಸಲು ರಾಜ್ಯ ಸರ್ಕಾರ ತಯಾರಿ ನಡೆಸಿತ್ತು. ಇದಕ್ಕೆ ಪೂರಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು ಹಾಗೂ ಮೈಸೂರಿನಲ್ಲಿ ಜಿಲ್ಲೆಯ ಕಾಂಗ್ರೆಸ್ ಶಾಸಕರು, ನಗರ ಪಾಲಿಕೆ ಸದಸ್ಯರ ಸಭೆ ನಡೆಸಿ ಮಾಹಿತಿ ಪಡೆದಿದ್ದರು. ಆದರೆ, ನಂತರ ಎದುರಾದ ಲೋಕಸಭೆ ಹಾಗೂ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರ ನಗರ ಪಾಲಿಕೆ ಚುನಾವಣೆಯ ಕಡೆಗೆ ಆಸಕ್ತಿ ತೋರಲಿಲ್ಲ. ನಗರ ಪಾಲಿಕೆಯಲ್ಲಿ ಜನಪ್ರತಿನಿಧಿಗಳು ಇಲ್ಲದೆ ಈಗಾಗಲೇ 10 ತಿಂಗಳು ಕಳೆದು ಹೋಗಿದೆ.
ನಗರ ಪಾಲಿಕೆಯಲ್ಲಿ ಚುನಾಯಿತ ಪ್ರತಿನಿಧಿಗಳು ಇಲ್ಲದೆ ಇದ್ದರೂ ಮುಂದೆ 65 ವಾರ್ಡ್‌ಗಳಿಗೆ ಚುನಾವಣೆ ನಡೆಸಿದ ನಂತರ ನಡೆಯುವ ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ರಾಜ್ಯ ಸರ್ಕಾರ ಈಗಲೇ ಮೀಸಲಾತಿ ಘೋಷಣೆ ಮಾಡಿದೆ. ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರ ಏಕಕಾಲದಲ್ಲಿ ಮೀಸಲಾತಿ ಘೋಷಣೆ ಮಾಡುವ ಸಂದರ್ಭ ನಗರ ಪಾಲಿಕೆಯ ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೂ ಮೀಸಲಾತಿ ಘೋಷಣೆ ಮಾಡಲಾಗಿದೆ. ಮೇಯರ್ ಸ್ಥಾನವನ್ನು ಸಾಮಾನ್ಯ ಮಹಿಳೆಗೆ, ಉಪ ಮೇಯರ್ ಸ್ಥಾನ ವನ್ನು ಸಾಮಾನ್ಯ ಮಹಿಳೆಗೆ ಮೀಸಲಿಡಲಾಗಿದ್ದು, ಮಹಿಳೆಯರಲ್ಲಿ ಸಂತಸ ಮೂಡಿಸಿದೆ.
ಕಳೆದ ಬಾರಿ ಪಾಲಿಕೆಯ 65 ವಾರ್ಡ್‌ಗಳಿಗೆ 31 ಆಗಸ್ಟ್ 2018ರಂದು ಚುನಾವಣೆ ನಡೆದು ಸದಸ್ಯರು ಆಯ್ಕೆಗೊಂಡಿದ್ದರು. ಆದರೆ, ಸರ್ಕಾರ ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಮೀಸಲಾತಿ ಘೋಷಣೆ ಮಾಡಲು ವಿಳಂಬ ತೋರಿದ ಹಿನ್ನೆಲೆಯಲ್ಲಿ 17 ನವೆಂಬರ್ 2018 ರಂದು ತಡವಾಗಿ ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ನಡೆಯಿತು. ಇದರಿಂದ ಎರಡೂವರೆ ತಿಂಗಳು ಸದಸ್ಯರು ಅಧಿಕಾರ ಇಲ್ಲದೆ ಕಾಲ ಕಳೆದರು. ಆದರೆ, ಈ ಬಾರಿ ಪಾಲಿಕೆಯ 65 ವಾರ್ಡ್‌ಗಳಿಗೆ ಚುನಾವಣೆ ಘೋಷಣೆಯಾಗುವ ಮುನ್ನವೇ ನಗರ ಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಮೀಸಲಾತಿ ನಿಗದಿ ಪಡಿಸಿರುವುದು ಅಚ್ಚರಿ ಮೂಡಿಸಿದೆ. ಇದರಿಂದ ಪಾಲಿಕೆಯ 65 ವಾರ್ಡ್‌ಗಳಿಗೆ ಚುನಾವಣೆ ನಡೆದ ತಕ್ಷಣವೇ ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೂ ಚುನಾವಣೆ ನಡೆಸಲು ಸಹಕಾರಿಯಾಗಲಿದ್ದು, ಕಳೆದ ಬಾರಿಯಂತೆ ವಿಳಂಬವಾಗುವುದು ತಪ್ಪುತ್ತದೆ.
ಮಹಿಳೆಯರಿಗೆ ಹೆಚ್ಚು ಅವಕಾಶ: 2013 ರಿಂದ 2018ರ ಪಾಲಿಕೆ ಅಧಿಕಾರಾವಧಿಯಲ್ಲಿ ಒಟ್ಟು 5 ಮೇಯರ್ ಹಾಗೂ 5 ಉಪ ಮೇಯರ್‌ಗಳನ್ನು ನಗರ ಪಾಲಿಕೆ ಕಂಡಿತು. ಈ ಪೈಕಿ ಮೇಯರ್‌ಗಳಾಗಿ 3 ಪುರುಷರು, 2 ಮಹಿಳೆಯರು ಆಯ್ಕೆಗೊಂಡರು. ಈ ಅವಧಿಯಲ್ಲಿ ಉಪ ಮೇಯರ್‌ಗಳಾಗಿ 4 ಮಹಿಳೆಯರು, 1 ಪುರುಷ ಆಯ್ಕೆಗೊಂಡರು. 2018 ರಿಂದ 2023ರ ಅವಧಿಯಲ್ಲಿ ಒಟ್ಟು 5 ವರ್ಷಗಳಲ್ಲಿ 5 ಮೇಯರ್‌ಗಳು ಆಯ್ಕೆಗೊಳ್ಳಬೇಕಾಗಿತ್ತು. ಆದರೆ, ಪ್ರತಿ ಬಾರಿ ಮೇಯರ್ ಹಾಗೂ ಉಪ ಮೇಯರ್ ಸ್ಥಾನ ತೆರವುಗೊಂಡ ತಕ್ಷಣ ಸರ್ಕಾರ ಮೀಸಲಾತಿ ಘೋಷಣೆ ಮಾಡಲು ಆಸಕ್ತಿ ತೋರದ ಹಿನ್ನೆಲೆಯಲ್ಲಿ 5 ವರ್ಷಗಳಲ್ಲಿ 4 ಅವಧಿಗೆ ಮಾತ್ರ ಚುನಾವಣೆ ನಡೆಯಿತು. ಆದರೆ, ಕೆಲವು ರಾಜಕೀಯ ಬೆಳವಣಿಗೆಯಿಂದ ಒಂದು ಅವಧಿಯಲ್ಲಿ ಇಬ್ಬರು ಮೇಯರ್‌ಗಳನ್ನು ಪಾಲಿಕೆ ಕಂಡಿತು. ಹೀಗಾಗಿ 2018-2023ರ ಅವಧಿಯಲ್ಲಿ 5 ಮೇಯರ್‌ಗಳು ಹಾಗೂ 4 ಉಪ ಮೇಯರ್‌ಗಳು ಆಯ್ಕೆಗೊಂಡರು. ಈ ಪೈಕಿ ಮೇಯರ್‌ಗಳಾಗಿ 4 ಮಹಿಳೆಯರು, 1 ಪುರುಷ, ಉಪ ಮೇಯರ್‌ಗಳಾಗಿ 3 ಪುರುಷ, 1 ಮಹಿಳೆ ಆಯ್ಕೆಗೊಂಡರು.
ಮುಂದಿನ ಐದು ವರ್ಷಗಳ ಅವಧಿಯಲ್ಲಿ ಎಷ್ಟು ಮಹಿಳೆಯರು ಹಾಗೂ ಪುರುಷರು ಮೇಯರ್ ಹಾಗೂ ಉಪ ಮೇಯರ್ ಸ್ಥಾನವನ್ನು ಅಲಂಕರಿಸಲಿದ್ದಾರೆ ಎಂಬ ಕುತೂಹಲ ಮೂಡಿದೆ. ಒಂದೆಡೆ ಸರ್ಕಾರ ಮೇಯರ್ ಹಾಗೂ ಮೇಯರ್ ಸ್ಥಾನಕ್ಕೆ ಮೀಸಲಾತಿ ಘೋಷಣೆ ಮಾಡಿರುವುದು ಮತ್ತೊಂದೆಡೆ ಅಧಿಕಾರಾವಧಿ ಮುಕ್ತಾಯಗೊಂಡಿರುವ ಮೈಸೂರು, ತುಮಕೂರು ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆಗಳಿಗೆ ಚುನಾವಣೆ ನಡೆಸಲು ಸದ್ಯದಲ್ಲಿಯೇ ಅಧಿಸೂಚನೆ ಹೊರಡಿಸಲಾಗುವುದು ಎಂದು ರಾಜ್ಯ ಮುಕ್ತ ಚುನಾವಣಾ ಆಯುಕ್ತ ಗದಿಗೆಪ್ಪ ಸಣ್ಣಬಸಪ್ಪ ಸಂಗ್ರೇಶಿ ಹೇಳಿಕೆ ನೀಡಿರುವುದನ್ನು ಗಮನಿಸಿದರೆ ಚುನಾವಣೆ ಸದ್ಯದಲ್ಲಿಯೇ ನಡೆಯುವ ಸಾಧ್ಯತೆ ಇದೆ.
2013-2018ರ ಅವಧಿಯ ಮೇಯರ್, ಉಪ ಮೇಯರ್
ಎನ್.ಎಂ. ರಾಜೇಶ್ವರಿ - ವಿ.ಶೈಲೇಂದ್ರ
ಆರ್.ಲಿಂಗಪ್ಪ - ಮಹದೇವಮ್ಮ
ಬಿ.ಎಲ್. ಭೈರಪ್ಪ - ವನಿತಾ ಪ್ರಸನ್ನ
ಎಂ.ಜೆ. ರವಿಕುಮಾರ್ - ರತ್ನಾ ಲಕ್ಷ್ಮಣ್
ಬಿ.ಭಾಗ್ಯವತಿ - ಇಂದಿರಾ ಮಹೇಶ್
2018-2023ರ ಅವಧಿಯ ಮೇಯರ್, ಉಪ ಮೇಯರ್
ಪುಷ್ಪಲತಾ ಜಗನ್ನಾಥ್ - ಶಫಿ ಅಹಮ್ಮದ್
ತಸ್ನಿಂ - ಸಿ. ಶ್ರೀಧರ್
ರುಕ್ಮಿಣಿ ಮಾದೇಗೌಡ - ಅನ್ವರ್ ಬೇಗ್
ಸುನಂದಾ ಪಾಲನೇತ್ರ - ಅನ್ವರ್ ಬೇಗ್
ಶಿವಕುಮಾರ್ - ಜಿ. ರೂಪಾ