

ತೇರದಾಳ: ದೀಪವು ಜ್ಞಾನದ ಸಂಕೇತ. ಅಜ್ಞಾನ ಹೊಡೆದೊಡಿಸಿ ಜ್ಞಾನ ಬೆಳಗುವ ದೀಪೋತ್ಸವ ಪ್ರತಿ ಮನೆಗಳಲ್ಲಿ ಸನ್ಮಂಗಳನ್ನು ನೀಡಲಿ ಎಂದು ಚಿಮ್ಮಡದ ಪ್ರಭು ಸ್ವಾಮೀಜಿ ಹೇಳಿದರು.
ತಾಲೂಕಿನ ಕಾಲತಿಪ್ಪಿ ಗ್ರಾಮದ ಸ್ವಯಂಭು ಮಾರುತೇಶ್ವರ ದೇವಸ್ಥಾನದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಕಾರ್ತಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮವು ಚಿಕ್ಕದಾದರೂ ಅಧ್ಯಾತ್ಮ ಮತ್ತು ಅನ್ನದಾಸೋಹವನ್ನು ನಿರಂತರ ಮಾಡುತ್ತ ಸಂಸ್ಕಾರ ತುಂಬುವ ಕಾರ್ಯ ಮಾಡುತ್ತಿರುವುದು ಸ್ಮರಣೀಯ ಎಂದರು.
ಬನಹಟ್ಟಿಯ ಹಿರೇಮಠದ ಶರಣಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ತೇರದಾಳ ಹಿರೇಮಠದ ಗಂಗಾಧರದೇವರು, ಬಬಲಾದಿ ಹಿರೇಮಠದ ಅಪ್ಪಯ್ಯ ಹಿರೇಮಠ ಸ್ವಾಮೀಜಿ, ಶರಣೆ ಅಶ್ವಿನಿ ತಾಯಿ, ಅರ್ಚಕ ಕಲ್ಲಪ್ಪ ನಾಯಕ, ಮಹಾದೇವ ನಾಯಕ ಇತರರಿದ್ದರು.
ಶಿವಾನಂದ ಮರೆಗುದ್ದಿ ಸ್ವಾಗತಿಸಿದರು. ಶಿಕ್ಷಕ ಈರಣ್ಣ ಲಟ್ಟಿ ನಿರೂಪಿಸಿದರು. ಮಲ್ಲಿಕಾರ್ಜುನ ಪಾಟೀಲ ವಂದಿಸಿದರು.
ಸಂಪ್ರದಾಯದಂತೆ ದೇವಸ್ಥಾನದಲ್ಲಿ ವಿಶೇಷ ಪೂಜೆ, ಪಲ್ಲಕ್ಕಿ ಉತ್ಸವಗಳು ಸಕಲ ವಾದ್ಯಗಳೊಂದಿಗೆ ನಡೆದವು. ತೆಪ್ಪದಲ್ಲಿರುವ ಹನುಮಾನ ಮೂರ್ತಿ ಸುತ್ತಲೂ ದೀಪ ಹಚ್ಚಿ ಸಿಂಗರಿಸಲಾಗಿತ್ತು. ಮಹಿಳೆಯರು ಸೇರಿ ನೂರಾರು ಭಕ್ತರು ಜಾತ್ರೆಯಲ್ಲಿ ಭಾಗಿಯಾಗಿ ದರ್ಶನ ಪಡೆದುಕೊಂಡರು. ಭಜನೆ ಸೇರಿ ರಾತ್ರಿ ನಾಟಕ ಪ್ರದರ್ಶನ ನಡೆಯಿತು. ಪ್ರಸಾದ ಸಮಿತಿಯಿಂದ ಬೆಳಗ್ಗೆಯಿಂದಲೇ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.