

ಕುಣಿಗಲ್(ತುಮಕೂರು): ಮೂರು ವರ್ಷಗಳಿಂದ ಕತ್ತಲೆ ಕೋಣೆಯಲ್ಲಿ ಬಂಧಿಯಾಗಿದ್ದ ಯುವಕನನ್ನು ಕುಣಿಗಲ್ ತಾಲೂಕು ಆಡಳಿತ ಮುಕ್ತಗೊಳಿಸಿದೆ.
ಯಲಗಲವಾಡಿ ಗ್ರಾಮದ ವೇದಮೂರ್ತಿ ಮತ್ತು ಗೌರಮ್ಮ ದಂಪತಿ ಪುತ್ರ ನವೀನ್, ಪಾಳು ಬಿದ್ದ ಕತ್ತಲೆ ಕೋಣೆಯಲ್ಲಿ ಬಂಧಿಯಾಗಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಸುದ್ದಿ ತಿಳಿಯುತ್ತಿದ್ದಂತೆ ಸೋಮವಾರ ಸ್ಥಳಕ್ಕೆ ಬಂದ ತಹಸೀಲ್ದಾರ್ ಮಹಾಬಲೇಶ್ವರ್ ಹಾಗೂ ತಾಲೂಕು ಆರೋಗ್ಯಾಧಿಕಾರಿ ಜಗದೀಶ್, ಯುವಕನ ತಾಯಿ ಗೌರಮ್ಮ ಅವರ ಮನವೊಲಿಸಿ ಯುವಕನನ್ನು ಕತ್ತಲೆ ಕೋಣೆಯಿಂದ ಹೊರ ತಂದರು.
ಯುವಕ ನವೀನ್ ಇದಕ್ಕೂ ಮೊದಲು ಚೆನ್ನಾಗಿಯೇ ಇದ್ದ. ದಾಯಾದಿಗಳು ಆಸ್ತಿ ಕಿತ್ತುಕೊಳ್ಳಲು ಹುಚ್ಚನ ಪಟ್ಟ ಕಟ್ಟಿ ಮಾನಸಿಕ ಅಸ್ವಸ್ಥನಾಗುವಂತೆ ಮಾಡಿದ್ದಾರೆಂಬ ಆರೋಪ ಇದೆ. ಈ ನಡುವೆ ಕೈಗೆ ಸಿಕ್ಕ ವಸ್ತುಗಳಿಂದ ಎಲ್ಲರ ಮೇಲೆ ಯುವಕ ಹಲ್ಲೆ ಮಾಡುತ್ತಿದ್ದರಿಂದ ತಾಯಿ ಗೌರಮ್ಮ ಪಾಳು ಬಿದ್ದ ಕತ್ತಲೆ ಕೋಣೆಯಲ್ಲೇ ಮೂರು ವರ್ಷದಿಂದ ಕೂಡಿ ಹಾಕಿದ್ದರು ಎನ್ನಲಾಗಿದೆ. ವಿಷಯ ತಿಳಿದ ಮಾನವ ಹಕ್ಕುಗಳ ಸೇವಾ ಕೇಂದ್ರ ಸಂಸ್ಥಾಪಕ ಸಿದ್ದಲಿಂಗೇಗೌಡ, ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಕ್ಕೆ ದೂರು ನೀಡಿದ್ದರು. ನವೀನ್ ದುಸ್ಥಿತಿ ಕುರಿತು 'ಯುವಕನಿಗೆ ಕತ್ತಲೆ ಕೋಣೆ ಶಿಕ್ಷೆ' ಎಂಬ ಶೀರ್ಷಿಕೆಯಲ್ಲಿ ಅ.4ರಂದು ವಿಜಯವಾಣಿ ವಿಶೇಷ ವರದಿ ಪ್ರಕಟಿಸಿತ್ತು.
ತಹಸೀಲ್ದಾರ್ ಹಾಗೂ ತಾಲೂಕು ಆರೋಗ್ಯಾಧಿಕಾರಿ ಇಬ್ಬರೂ ಯುವಕನ ತಾಯಿ ಗೌರಮ್ಮರ ಮನವೊಲಿಸಿ ನವೀನ್ನನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.